ಬಾಗೇಪಲ್ಲಿಯಲ್ಲಿ ಮಹಿಳೆಯರ ದರ್ಬಾರ್
ಬಾಗೇಪಲ್ಲಿ: ತಾಪಂ ಅಧ್ಯಕ್ಷ ಮತ್ತು ಉಪಾದ್ಯಕ್ಷ ಸ್ಥಾನಗಳಿಗೆ ಮೂರನೇ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಸಿಪಿಐ(ಎಂ)ಪಕ್ಷಕ್ಕೆ ಸೇರಿದ ಕೆ.ಎನ್. ಸುಜಾತಾ ಪಾಪಿರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಹಾಗೂ ಸಿಪಿಎಂ ಮೈತ್ರಿಕೂಟದ ಸುಜಾತಮ್ಮ ಚುನಾಯಿತರಾಗಿದ್ದಾರೆ.
ಉಪ ವಿಭಾಗಾಧಿಕಾರಿ ಕೆ.ಟಿ.ಶಾಂತಲಾ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ (ಸಾಮಾನ್ಯ ಮಹಿಳೆ) ಸೋಮನಾಥ ಕ್ಷೇತ್ರ ಸದಸ್ಯೆ ಕೆ.ಎನ್.ಸುಜಾತ ಪಾಪಿರೆಡ್ಡಿ ಹೆಸರನ್ನು ಶೋಭಾರಾಣಿ ಮತ್ತು ಗೋಪಾಲಕೃಷ್ಣ ಸೂಚಿಸಿದರು. ಇವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಹಾಗಾಗಿ ಚುನಾವಣಾಧಿಕಾರಿಗಳು ಸುಜಾತಾ ಅವರ ಆಯ್ಕೆಯನ್ನು ಘೋಷಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಯಲ್ಲಂಪಲ್ಲಿ ಕ್ಷೇತ್ರದ ಸಿಪಿಎಂ ಸದಸ್ಯೆ ಶೋಭಾರಾಣಿ ಅರ್ಹತೆ ಪಡೆದಿದ್ದರೂ ಸಹ ಕೆಲವು ಕಾರಣಾಂತರಗಳಿಂದ ಕೊನೆಗಳಿಗೆಯಲ್ಲಿ ಜೆಡಿಎಸ್ ಸದಸ್ಯೆ ಸುಜಾತಮ್ಮ ಅವರನ್ನು ಬೆಂಬಲಿಸಿದರು. ಈ ಚುನಾವಣೆಯಲ್ಲಿ ಸುಜಾತಮ್ಮ 11 ಮತ, ಪರಾಜಿತ ಕಾಂಗ್ರೆಸ್‌ನ ಗೊರ್ತಪಲ್ಲಿ ಕ್ಷೇತ್ರದ ಸದಸ್ಯೆ ನಿರ್ಮಲಮ್ಮ 4 ಮತ ಪಡೆದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಬೆಂಬಲಿಗರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಆಚರಿಸಿದರು.
ತಾಲೂಕಿನಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವುದಲ್ಲದೇ ಜನರಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸುವುದಾಗಿ ನೂತನ ಅಧ್ಯಕ್ಷರು ತಿಳಿಸಿದರು.
ಈ ವೇಳೆ, ತಹಸೀಲ್ದಾರ್ ಟಿ.ಎಂ.ನಾಗರಾಜ್, ತಾಪಂ ಇಒ ಸಿ.ಶ್ರೀನಿವಾಸ್, ಅಧಿಕಾರ ತ್ಯಜಿಸಿದ ಅಧ್ಯಕ್ಷೆ ಮುನಿರತ್ನಮ್ಮ, ಸಾಕ್ಷರತಾ ಸಂಯೋಜಕ ಎನ್ .ಶಿವಪ್ಪ, ಸದಸ್ಯರಾದ ಜಯಸಿಂಹಾರೆಡ್ಡಿ, ನಾರಾಯಣ ನಾಯಕ್, ನಾರಾಯಣಪ್ಪ, ವೆಂಕಟರೆಡ್ಡಿ, ಪುರಸಭೆಯ ಸದಸ್ಯ ಮಹಮ್ಮದ್ ಅಕ್ರಂ, ಮುಖಂಡರಾದ ಆಂಜನೇಯರೆಡ್ಡಿ, ಹೇಮಚಂದ್ರ ಮುಂತಾದವರು ಉಪಸ್ಥಿತರಿದರು.