ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗಡಿನಾಡಲ್ಲಿ ಅದ್ಧೂರಿ ಕನ್ನಡ ಹಬ್ಬ

Mainashree
Updated On : 19 Jul 2014, 12:12 pm

ಬಾಗೇಪಲ್ಲಿ: ಆಂಧ್ರದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ ಪಟ್ಟಣದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ನೀಡಲಾಯಿತು. ಪಟ್ಟಣದೆಲ್ಲೆಡೆ ಸಮ್ಮೇಳನದ ಪ್ರತೀಕವಾಗಿ ಕನ್ನಡ ಬಾವುಟಗಳು ರಾರಾಜಿಸಿದವು. ರೈತ, ಮಹಿಳಾ, ಕನ್ನಡ, ವಿದ್ಯಾರ್ಥಿ ಪರ ಸಂಘಟನೆಗಳು, ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಮುಖಂಡರು ಸೇರಿದಂತೆ ಸಹಸ್ರಾರು ಜನರ ಸಮ್ಮಿಲನೊಂದಿಗೆ ಕನ್ನಡನಾಡು ನುಡಿ ಗುಣಗಾನ ನಡೆಯಿತು. ಪಟ್ಟಣದ ಹೊರವಲಯದ ಟಿ.ಬಿ. ಕ್ರಾಸ್‌ನಿಂದ ನ್ಯಾಷನಲ್ ಕಾಲೇಜಿನವರೆಗೂ ಕನ್ನಡ ಬಾವುಟಗಳನ್ನು ಹಾಕಲಾಗಿತ್ತು. ಫ್ಲೆಕ್ಸ್, ಬ್ಯಾನರುಗಳು ರಾರಾಜಿಸುತ್ತಿದ್ದವು. ಇನ್ನೂ ಕಾರ್ಯಕ್ರಮ ನಡೆಯುವ ಸ್ಥಳವಾದ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆ ಆವರಣದಲ್ಲಿ ಕನ್ನಡಾಭಿಮಾನಿಗಳ ಕಲರವ ಕಂಡು ಬಂತು. ಜಿಲ್ಲೆಯ ವಿವಿಧೆಡೆಯಿಂದ ಸಾಹಿತ್ಯಾಭಿಮಾನಿಗಳು ಆಗಮಿಸಿದ್ದರು. ಆಂಧ್ರದಿಂದಲೂ ಹಲವರು ಬಂದು ಕಾರ್ಯಕ್ರಮಕ್ಕೆ ಸಾಥ್  ನೀಡಿದ್ದು ಕನ್ನಡ ಮತ್ತು ತೆಲುಗು ಭಾಷೆಯ ನಡುವಿನ ಸೌಹಾರ್ದ ವಾತಾವರಣಕ್ಕೆ ಹಿಡಿದ ಕನ್ನಡಿಯಾಗಿತ್ತು. ಗಡಿ ಭಾಗದಲ್ಲಿರುವುದರಿಂದ ಈ ಭಾಗದಲ್ಲಿ ಬಹುತೇಕರ ಮಾತೃ ಭಾಷೆ ತೆಲಗು. ಆದರೆ ಕನ್ನಡ ಭಾಷೆ, ಜಲ, ನೆಲ ವಿಷಯಕ್ಕೆ ಧಕ್ಕೆಯಾದರೆ ಕನ್ನಡಿಗರಾಗಿ ತಮ್ಮ ನಾಡಿನ ರಕ್ಷಣೆಗಾಗಿ ಪ್ರತಿಯೊಬ್ಬ ಕನ್ನಡಿಗನು ಹೋರಾಟಕ್ಕೆ ಸಜ್ಜಾಗುತ್ತಾರೆ ಹಾಗೂ ಕನ್ನಡದ ಯಾವುದೇ ಕಾರ್ಯಕ್ರಮಗಳು ನಡೆದರೂ ಕನ್ನಡ ತೆಲಗು ಭಾಷಿಗರು ಎಂಬ ಭೇದಭಾವ ಮರೆತು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಾರೆ ಎನ್ನುವುದನ್ನು ನಿರೂಪಿಸಿತು. ಇದಕ್ಕೆ ಅಕ್ಷರ ಜಾತ್ರೆಯ ಹಬ್ಬಕ್ಕೆ ಹರಿದು ಬಂದ ಜನ ಸಾಗರವೇ ಸಾಕ್ಷಿಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement