ಲಂಚ: ಅಂಬೇಡ್ಕರ್ ನಿಗಮದ ಮೇಲ್ವಿಚಾರಕಿ ಲೋಕಾ ಬಲೆಗೆ
ಚಿಕ್ಕಬಳ್ಳಾಪುರ: ಫಲಾನುಭವಿಗೆ ಸರ್ಕಾರದ ಸವಲತ್ತನ್ನು ದೊರಕಿಸಿಕೊಡಲು ಜಿಲ್ಲಾಡಳಿತ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ 7 ಸಾವಿರ ರು. ಲಂಚ ಪಡೆದುಕೊಳ್ಳುತ್ತಿದ್ದ ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೇಲ್ವಿಚಾರಕಿಯೊಬ್ಬರು ಶುಕ್ರವಾರ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೇಲ್ವಿಚಾರಕಿ ವೆನ್ನೆಲ್ಲಾ (34) ಲಂಚಕ್ಕೆ ಕೈಯೊಡ್ಡಿ ಜೈಲು ಸೇರಿರುವಂತಹುದು. ಲೋಕಾಯುಕ್ತ ಡಿವೈಎಸ್ಪಿ ಬೋಪಯ್ಯ ಮತ್ತು ಇನ್ಸ್ಪೆಕ್ಟರ್ ಮಂಜೇಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ತಮ್ಮ ಬಲೆಗೆ ಬೀಳಿಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಮಲ್ಲಿಶೆಟ್ಟಿಪುರ ಗ್ರಾಮದ ಮುನಿರಾಜು ಸಫಾಯಿ ಕರ್ಮಚಾರಿಯಿಂದ ದೊರೆಯುವ ಸಾಲ ಸೌಲಭ್ಯಕ್ಕಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ಫಲಾನುಭವಿಯಾಗಿ ಆಯ್ಕೆಯಾದ ಇವರ ಅರ್ಜಿಯನ್ನು ಬೆಂಗಳೂರಿನ ತಮ್ಮ ಕೇಂದ್ರ ಕಚೇರಿಗೆ ಕಳುಹಿಸಿ ಹಣವನ್ನು ಬಿಡುಗಡೆ ಮಾಡಿಸಿಕೊಡುವಲ್ಲಿ ವೆನ್ನೆಲ್ಲಾ ಸತಾಯಿಸುತ್ತಿದ್ದರು. ಅರ್ಜಿ ವಿಲೇವಾರಿಗೆ 15 ಸಾವಿರ ರು. ಲಂಚ ಕೊಡಬೇಕೆಂದು ಒತ್ತಾಯಿಸಿದ್ದರು. ಕೊನೆಗೆ ಮಾತಿನಲ್ಲಿ 10 ಸಾವಿರ ರು. ಕೊಡುವ ಒಪ್ಪಂದವಾಗಿತ್ತು. ಮೊದಲು 2 ಸಾವಿರ, ಆ ನಂತರ 1 ಸಾವಿರ ರು. ಗಳನ್ನು ಎರಡು ಬಾರಿ ಮುನಿರಾಜು ನೀಡಿದ್ದರು. ಆದರೆ, ಕಂತಿನಲ್ಲಿ ಹಣವನ್ನು ನೀಡುತ್ತಿದ್ದ ಹಿನ್ನೆಲೆಯಲ್ಲಿ ಒಂದೇ ಸಲ ಬಾಕಿ ಹಣ ಕೊಡುವಂತೆ ವೆನ್ನೆಲ್ಲಾ ಒತ್ತಾಯಿಸಿದಾಗ ಮುನಿರಾಜು ಲೋಕಾಯುಕ್ತ ಕದ ತಟ್ಟಿದ್ದಾರೆ. ತಮಗೆ ಬಂದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತರು, ಶುಕ್ರವಾರ ಬಾಕಿ 7 ಸಾವಿರ ರು.ಗಳ ಲಂಚ ಫಲಾನುಭವಿಯಿಂದ ಪಡೆದುಕೊಳ್ಳುವಾಗ ವೆನ್ನೆಲ್ಲಾರವರನ್ನು ಸಾಕ್ಷಿ ಸಮೇತ ಹಿಡಿದುಕೊಂಡಿದ್ದಾರೆ. ಆ ನಂತರ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.