ಹುಸಿ ಬಾಂಬ್ಗೆ ಬೆಚ್ಚಿದ ಜನ
ಶಿಡ್ಲಘಟ್ಟ: ತೋಟವೊಂದರಲ್ಲಿ ಬಿದ್ದಿದ್ದ ಪ್ಯಾರಾಚೂಟ್ ಮಾದರಿಯ ವಸ್ತುವೊಂದು ಜನರಲ್ಲಿ ಗಾಬರಿ ಉಂಟು ಮಾಡಿತು. ತಾಲೂಕಿನ ಹಂಡಿಗನಾಳ ಗ್ರಾಪಂ ಶಿಲೆಮಾಕನಹಳ್ಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ಬಿದ್ದಿದ್ದ ಎಲೆಕ್ಟ್ರಾನಿಕ್ ವಸ್ತುಗಳಿದ್ದ ಬಾಕ್ಸ್ ಕಂಡು ಬಂದಿದ್ದು, ಗ್ರಾಮದ ಯುವಕರು ನೋಡಿದಾಗ ಅದರ ಮೇಲೆ ಬಾಂಬ್ ಎಂದು ಬರೆದಿದ್ದರಿಂದ ಗಾಬರಿಗೊಂಡು ಗ್ರಾಮಾಂತರ ಠಾಣೆಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಪೇದೆ ಬಾಕ್ಸ್ನಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರಿಶೀಲನೆ ನಡೆಸಿ ಹುಸಿಬಾಂಬ್ ಎಂದು ತಿಳಿಸಿದ ನಂತರ ಗ್ರಾಮಸ್ಥರು ಸಮಾಧಾನ ಪಟ್ಟರು.
ಅಪಘಾತದಲ್ಲಿ ವ್ಯಕ್ತಿಗೆ ಗಾಯ
ಶಿಡ್ಲಘಟ್ಟ: ಎಚ್.ಕ್ರಾಸ್ನಲ್ಲಿ ಕಾರಿಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂಗೊಂಡಿವೆ. ಎಚ್ ಕ್ರಾಸ್ ವೃತ್ತದಲ್ಲಿ ಚಿಂತಾಮಣಿ ಕಡೆಯಿಂದ ಬರುತ್ತಿದ್ದ ಮಾರುತಿ ಕಾರಿಗೆ ವಿಜಯಪುರದಿಂದ ಕೋಲಾರದ ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಆರೋಪಿಗಳ ಬಂಧನ
ಕೆಜಿಎಫ್: ಆಂಧ್ರಪ್ರದೇಶ ಮೂಲದ ರಾಮಕುಪ್ಪಂ ಮಂಡಲ್ ಚೆನ್ನಾರೆಡ್ಡಿಪಲ್ಲಿ ನಿವಾಸಿ ಕೇಶವಲು(45) ಎಂಬವನನ್ನು ಕೊಲೆ ಮಾಡಿ ರಾಜ್ಯದ ಗಡಿ ಅರಣ್ಯ ಪ್ರದೇಶದ ಪೀಲಾವರ ಗ್ರಾಮದ ನೀಲಗಿರಿ ತೋಪಿನಲ್ಲಿ ಹೂತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳನ್ನು ಆಂಡ್ರಸನ್ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಕುಪ್ಪಂ ಮಂಡಲ್ ವ್ಯಾಪ್ತಿಯ ನಿವಾಸಿಗಳಾದ ಗಂಗಾಧರ್(29), ವೆಂಕಟೇಶ್(24) ಸುಧಾಕರ್(25) ಹಾಗೂ ಸುಬ್ರಮಣಿ(25) ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.