ಕ್ಷಿಪ್ರ ಕಾರ್ಯ ಪಡೆ ಯೋಧರಿಂದ ಸಮೀಕ್ಷೆ
ಕೋಲಾರ: ಕೇಂದ್ರ ಮೀಸಲು ಪಡೆಗೆ ಸೇರಿದ ಕ್ಷಿಪ್ರ ಕಾರ್ಯ ಪಡೆ (ಆರ್.ಎ.ಎಫ್)ಯೋಧರು ಕೋಲಾರ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಕುರಿತು ಐದು ದಿನಗಳ ಸಮೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ ಹಿಂತಿರುಗಿದರು.
ಕ್ಷಿಪ್ರ ಕಾರ್ಯಪಡೆಯ 105ನೇ ಬೆಟಾಲಿಯನ್ ಕಮಾಂಡೆಂಟ್ ಸುನೀಲ್ ಕುಮಾರ್ ನೇತೃತ್ವದಲ್ಲಿ ಕೋಲಾರ ಜಿಲ್ಲೆಗೆ ಕಳೆದ ಐದು ದಿನಗಳ ಹಿಂದೆ ಬಂದಿದ್ದ 60 ಮಂದಿ ಯೋಧರು ಕೊನೆ ದಿನವಾದ ಭಾನುವಾರ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನೆರವೇರಿಸಿ ಜಿಲ್ಲಾಧಿಕಾರಿ ಡಿ.ಕೆ.ರವಿ ಮತ್ತಿತರರಿಂದ ಮೆಚ್ಚುಗೆ ಗಳಿಸಿದರು.
ಮಾಹಿತಿ ಸಂಗ್ರಹ: ಪ್ರತಿ ದಿನ ಒಂದು ತಾಲೂಕು ಆಯ್ಕೆ ಮಾಡಿಕೊಂಡು ಆಯಾ ತಾಲೂಕಿನ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಳೆದ ಎರಡು ವರ್ಷಗಳಲ್ಲಿನ ಕೋಮುಗಲಭೆ, ಸಮಾಜಘಾತುಕ ಕೃತ್ಯಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ದೂರುಗಳ ವಿವರ ಪಡೆದುಕೊಂಡಿದ್ದಾರೆ.
ಕೋಲಾರ ಜಿಲ್ಲೆ ಹಿಂದುಳಿದ ಪ್ರದೇಶ ಮಾತ್ರವಲ್ಲದೆ ಈ ಹಿಂದೆ ನಡೆದಿರುವ ಕೋಮುಗಲಭೆಯಿಂದ ಕುಖ್ಯಾತಿ ಪಡೆದಿರುವ ಹಿನ್ನೆಲೆಯಲ್ಲಿ ಮುಂದೆ ಈ ರೀತಿ ಆಗದಂತೆ ತಡೆಯಲು ಅನುಸರಿಸಬೇಕಾದ ಕ್ರಮಗಳ ಸಂಬಂಧ ಜಿಲ್ಲೆಯ ಬಹುತೇಕ ಸೂಕ್ಷ್ಮ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಿಂದ ಗುಪ್ತವಾಗಿ ಮಾಹಿತಿ ಕಲೆ ಹಾಕಿರುವ ಯೋಧರು, ಕೆಲವೊಂದು ಪ್ರದೇಶಗಳ ಸ್ಥಿತಿ-ಗತಿಗಳ ಚಿತ್ರಣ ಮಾಡಿಕೊಂಡಿದ್ದಾರೆ. ಕೆಜಿಎಫ್ ಜಿಲ್ಲಾ ವ್ಯಾಪ್ತಿಗೂ ಭೇಟಿ ನೀಡಿದ್ದ ಕ್ಷಿಪ್ರ ಕಾರ್ಯ ಪಡೆಯ ಯೋಧರು ಸಾರ್ವಜನಿಕರನ್ನು ಸಂಪರ್ಕಿಸಿ ಸ್ಥಳೀಯ ಕಾನೂನು ಸುವ್ಯವಸ್ಥೆ ಬಗ್ಗೆ ತಿಳಿದುಕೊಂಡಿದ್ದಾರೆ.
ವಿಶೇಷ ಅಧಿಕಾರ: ಒಂದು ವೇಳೆ ಕೋಲಾರ ಜಿಲ್ಲೆಯಲ್ಲಿ ಯಾವುದಾದರು ಕೋಮುಗಲಭೆ ಇಲ್ಲವೇ ಭಯೋತ್ಪಾದನೆ ಅಂತಹ ಸಮಾಜಘಾತುಕ ಕೃತ್ಯಗಳು ಸಂಭವಿಸಿದಲ್ಲಿ ಯಾರ ಅನುಮತಿಗೂ ಕಾಯದೆ ಜಿಲ್ಲೆಗೆ ಭೇಟಿ ನೀಡಿ ಸೂಕ್ಷ್ಮ ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಗಲಭೆ ನಿಯಂತ್ರಿಸುವ ವಿಶೇಷ ಅಧಿಕಾರವನ್ನು ಕ್ಷಿಪ್ರ ಕಾರ್ಯ ಪಡೆ ಹೊಂದಿದೆ.
ಸಮೀಕ್ಷೆ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಜಿಲ್ಲೆಯ ಸಮಗ್ರ ಚಿತ್ರಣ ಸಿಕ್ಕಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿ,ಪ್ರಾಣಕ್ಕೆ ತೊಂದರೆ ಆದಲ್ಲಿ ನಾವು ಬಂದು ನಿಯಂತ್ರಿಸುತ್ತೇವೆಂದು ಸುನೀಲ್ ಕುಮಾರ್ ತಿಳಿಸಿದರು.
-ಪಾ.ಶ್ರೀ. ಅನಂತರಾಮ್