ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆರ್‌ಎಂಪಿ ವೈದ್ಯರಿಗೆ ಶಾಕ್ ಟ್ರೀಟ್‌ಮೆಂಟ್!

Vishwanath S
Updated On : 22 Jul 2014, 12:57 pm

ಎನ್. ವೆಂಕಟೇಶ್  
ಚಿಕ್ಕಬಳ್ಳಾಪುರ:
ವೈದ್ಯಕೀಯ ಸೇವೆಯನ್ನು ಒದಗಿಸಲು ಸುಮಾರು 100ಕ್ಕೂ ಹೆಚ್ಚು ಆರ್‌ಎಂಪಿ (ನೋಂದಾಯಿತ ವೈದ್ಯಕೀಯ ತರಬೇತಿದಾರರು)ಸ್ವಯಂ ಘೋಷಿತ ವೈದ್ಯರು ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿ, ಇನ್ನೂ ಮುಂದೆ ರಾಜ್ಯದ ಎಲ್ಲೂ ಚಿಕಿತ್ಸೆ ನೀಡದಂತೆ ಎಚ್ಚರಿಕೆ ಕೊಡಲಾಗಿದೆ.
ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ರ ನಿಯಮ 3ರಂತೆ ಪ್ರತಿ ಖಾಸಗಿ ವೈದ್ಯಕೀಯ ಸಂಸ್ಥೆಯು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಆರ್‌ಎಂಪಿ ವೈದ್ಯರು ತಮ್ಮ ಹೆಸರು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ವೈದ್ಯಕೀಯ ನೋಂದಣಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆರ್. ವಿಶಾಲ್ ಅವರು ವಿದ್ಯಾರ್ಹತೆ ಮತ್ತು ತರಬೇತಿ ದಾಖಲೆಗಳನ್ನು ಪರಿಶೀಲಿಸಿ, ಖಾಸಗೀ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ರ ಅಡಿಯಲ್ಲಿ ನಿಯಮ 2,3,5,6,7,8,15ರಂತೆ ಹಾಗೂ ಕರ್ನಾಟಕ ಆರ್ಯುವೇದ, ನ್ಯಾಚುರೋಪತಿ, ಸಿದ್ಧ, ಯುನಾನಿ ಮತ್ತು ಯೋಗ ರಿಜಿಸ್ಟ್ರೇಷನ್ ಆ್ಯಂಡ್  ಮೆಡಿಕಲ್  ಪ್ರಾಕ್ಟೀಷನ್ಸ್  ಮಿಸಲೇನಿಯಸ್  ಪ್ರಾವಿಜನ್ಸ್  ಆಕ್ಟ್  1961ರ ಸೆಕ್ಷನ್  42 ಭಾಗ(2) ಪ್ರಕಾರ (ಹೊರ ರಾಜ್ಯದಲ್ಲಿ ತರಬೇತಿ ಪಡೆದ) ಆರ್‌ಎಂಪಿ ವೈದ್ಯರ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ನೋಂದಣಿಗೆ ಅಡ್ಡಿ
ಜಿಲ್ಲೆಯಲ್ಲಿ 184 ಆರ್‌ಎಂಪಿ ವೈದ್ಯರಿದ್ದಾರೆ. ಇದರಲ್ಲಿ ಅಧಿಕೃತವಾಗಿ 158 ಜನರನ್ನು ಗುರುತಿಸಲಾಗಿದೆ. ಇವರು ದೆಹಲಿ, ಬಿಹಾರ, ನಾಗಲ್ಯಾಂಡ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರ ಸೇರಿದಂತೆ ಹಲವೆಡೆ ಇರುವ ಕೆಲವು ಸಂಸ್ಥೆಗಳಿಂದ 6 ತಿಂಗಳ ಇಲ್ಲವೇ 1 ವರ್ಷದ ಚಿಕಿತ್ಸಕ ತರಬೇತಿಯನ್ನು ಮುಗಿಸಿರುವ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಜಿಲ್ಲೆಯ ವಿವಿಧೆಡೆ ಸ್ವಂತ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದಾರೆ. ಆರ್ಯುವೇದಿಕ್ ಚಿಕಿತ್ಸೆ ತರಬೇತಿ ಪಡೆದವರು ಆಲೋಪತಿ ಚಿಕಿತ್ಸೆ ನೀಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಆರ್‌ಎಂಪಿ ವೈದ್ಯರು ಅಲೋಪತಿ ಕ್ಲಿನಿಕ್‌ಗಳನ್ನು ನಡೆಸುವುದು ಅಪರಾಧ. ಅಲ್ಲದೇ ಯಾವ ರಾಜ್ಯದಲ್ಲಿ ತರಬೇತಿಯನ್ನು ಪಡೆಯಲಾಗಿರುತ್ತದೆಯೋ ಅಲ್ಲಿ ಹೆಸರನ್ನು ನೋಂದಾಯಿಸಿಕೊಂಡು ಅದರ ವ್ಯಾಪ್ತಿಯಲ್ಲಿಯೇ ಕಾರ್ಯ ನಿರ್ವಹಿಸಬೇಕು.
ಅನೇಕ ಕಡೆ ದಾಳಿ
ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿನ 80 ಕ್ಕೂ ಹೆಚ್ಚು ಖಾಸಗಿ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ, ಭಾರತೀಯ ವೈದ್ಯಕೀಯ ಸಂಘದ ತಂಡ ದಾಳಿ ನಡೆಸಿ ಹಲವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿತ್ತು. ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ದಾಳಿಯಲ್ಲಿ ಸಿಕ್ಕಿದವರೆಲ್ಲಾ ನಕಲಿ ವೈದ್ಯರು ಎಂದು ಆರೋಪಿಸಿತ್ತು.
ಅನಧಿಕೃತ ಸಂಸ್ಥೆಗಳಿಂದ ಸಿಕ್ಕಿದ ಯಾವುದೋ ತರಬೇತಿಯ ಪ್ರಮಾಣ ಪತ್ರಗಳನ್ನು ತೋರಿಸಿ ಕನಿಷ್ಠ ಎಸ್ ಎಸ್‌ಎಲ್‌ಸಿ ಪಾಸಾಗದವರೂ ಸಹ ಜನರಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಪತ್ತೆ ಹಚ್ಚಿತ್ತು.
ಆರ್‌ಎಂಪಿ ವೈದ್ಯರ ಅಳಲು
ರಾಜ್ಯದಲ್ಲಿ ವ್ಯಾಪಕವಾಗಿ ಕಾಡುತ್ತಿರುವ ವೈದ್ಯರ ಕೊರತೆಯನ್ನು ಅರಿಯದ ಸರ್ಕಾರ ಆರ್‌ಎಂಪಿ ವೈದ್ಯರು ಚಿಕಿತ್ಸೆ ನೀಡುವುದಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ಕಳೆದ 20 ವರ್ಷಗಳಿಂದಲೂ ಜನರಿಗೆ ಚಿಕಿತ್ಸೆಯನ್ನು ನೀಡುತ್ತ ಜೀವನ ಸಾಗಿಸಿಕೊಂಡು ಬರುತ್ತಿರುವ ನಾವು ಬೀದಿಪಾಲಾಗುವ ಪರಿಸ್ಥಿತಿ ಬಂದಿದೆ ಎಂದು ಆರ್‌ಎಂಪಿ ವೈದ್ಯರು ಅಳಲು ತೋಡಿಕೊಂಡಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement