ಜನಪದ ಕಲಾವಿದರ ಸಮೀಕ್ಷೆ ಕೋಲಾರ ಜಿಲ್ಲೇ ಮೊದಲು
ಮಾಲೂರು: ರಾಜ್ಯದಲ್ಲಿರುವ ಜಾನಪದ ಮೂಲ ಕಲಾವಿದರನ್ನು ಮತ್ತು ಕಲಾ ಪ್ರಕಾರಗಳನ್ನು ಸಮೀಕ್ಷೆ ಮಾಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಮೊದಲಿಗೆ ಕೋಲಾರ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಜಾನಪದ ಅಕಾಡಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗ್ರಾಮ ಲೋಕ ಶಿಕ್ಷಣ ಕೇಂದ್ರಗಳ ಪ್ರೇರಕರಿಗೆ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡುತ್ತ ರಾಜ್ಯದಲ್ಲಿ ಇದುವರೆಗೂ ಜನಪದ ಕಲಾ ಪ್ರಕಾರಗಳ ಸಮಗ್ರ ಮಾಹಿತಿ ಸಂಗ್ರಹವಿಲ್ಲ. ನಾನು ಅಧ್ಯಕ್ಷರಾದ ಮೇಲೆ ಈ ನಿಟ್ಟಿನಲ್ಲಿ ಯೋಚನೆ ಮಾಡಿ ರಾಜ್ಯದ ಜಾನಪದ ಕಲೆಯ ಸಮಗ್ರ ಮಾಹಿತಿ ಕ್ರೋಡಿಕರಿಸಲು ನಿರ್ಧರಿಸಿದ್ದು,ಪ್ರಥಮವಾಗಿ ಕೋಲಾರ ಜಿಲ್ಲೆಯನ್ನೇ ಆರಿಸಿಕೊಳ್ಳಲಾಗಿದೆ ಎಂದರು. ನಮ್ಮ ರಾಜ್ಯದಲ್ಲಿ147 ಜಾನಪದ ಕಲಾ ಪ್ರಕಾರಗಳು ಕಂಡು ಬಂದಿದೆ. ಅದರಲ್ಲಿ ಕೋಲಾರ ಜಿಲ್ಲೆಯಲ್ಲಿ 17 ಜನಪದ ಕಲಾವಿದರು ಮಾತ್ರ ಇದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವ ಸಲುವಾಗಿ ಗ್ರಾಮ ಲೋಕ ಶಿಕ್ಷಣದ ಪ್ರೇರಕರಿಂದ ಸಮೀಕ್ಷೆ ಮಾಡಿಸಲು ಈ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ನಮ್ಮ ಜಿಲ್ಲೆಯಲ್ಲಿರುವ ಕಲಾ ಪ್ರಕಾರಗಳಾದ ತಮಟೆ ವಾದನ, ಕೀಲುಗುದುರೆ, ವೇಣುನೃತ್ಯ, ಕೋಲಾಟ, ಕರಗ ನೃತ್ಯ, ಪಂಡರೀ ಭಜನೆ, ಸೋಬಾನೆ ಪದ, ಮುಖ ವೀಣೆ, ಕುರುಕೊಂಡ ಮಾಮ, ಬುರ್ರ ಕಥೆ, ಭಜನೆ,ಕಾವಡಿ,ಗಾರುಡಿ ಗೊಂಬೆ,ಮರಗಾಲು ನೃತ್ಯ,ಹುಲಿ ಸಿಂಹ ವೇಷ ಹಾಗೂ ಇತರೆ ಕಲಾ ಪ್ರಕಾರಗಳನ್ನು ಗುರ್ತಿಸಿ ಅವುಗಳನ್ನು ಪುನರುಜ್ಜೀವನಗೊಳಿಸಲು ಸಹಕರಿಸಬೇಕೆಂದರು. ಜಿಲ್ಲಾ ಲೋಕ ಶಿಕ್ಷಣ ಸಮಿತಿಯ ಕಾರ್ಯಕ್ರಮ ಸಹಾಯಕ ಡಿ.ಆರ್. ರಾಜಪ್ಪ,ತಾಲೂಕು ಲೋಕ ಶಿಕ್ಷಣ ಸಮಿತಿ ಸಂಯೋಜನಾಧಿಕಾರಿ ಬಾಲಕೃಷ್ಣ, ಸರ್ಕಾರೇತರ ಸಂಸ್ಥೆ ಸಂಯೋಜಕಿ ವಿ.ಎಸ್. ರಾಧ ಇದ್ದರು.