ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತರ ಸಮಸ್ಯೆಗಳಿಗೆ ಕಿವಿಗೊಡದ ಸರ್ಕಾರ

Vishwanath S
Updated On : 22 Jul 2014, 12:57 pm

ಕೆಜಿಎಫ್: ಜಿಲ್ಲೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಮಳೆಯಿಲ್ಲದೆ ಬೆಳೆ ಬೆಳೆಯಲು ನೀರಿಲ್ಲದೆ ರೈತರು  ಜಾನುವಾರುಗಳು ದಿನೆ ದಿನೆ ಸಂಕಷ್ಟದ ಜೀವನ ನಡೆಸುತ್ತಿದ್ದು ಸಾಲ ಮಾಡಿ ರೈತನು ಬೆಳೆದ ಬೆಳೆಗಳು ನಾಶವಾಗಿ ಬೆಲೆ ಕುಸಿತದಿಂದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರ್ ಹರಿಕುಮಾರ್ ಹೇಳಿದರು.
 34ನೇ ವರ್ಷದ ರೈತ ಹುತಾತ್ಮರ ದಿನಾಚರಣೆಯ ಅಂಗವಾಗಿ ಬೇತಮಂಗಲ ಪಟ್ಟಣದ ಬಸ್ ನಿಲ್ದಾಣದಲ್ಲಿ ರೈತ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಅದೇ ರೀತಿ ಇತ್ತೀಚೆಗೆ ರೈತನು ವ್ಯವಸಾಯ ಬಿಟ್ಟು ಸಂತೆಯಲ್ಲಿ ಜಾನುವಾರುಗಳನ್ನು ಮಾರಿಕೊಂಡು ಹಳ್ಳಿಗಳನ್ನು ತೊರೆದು ಕೂಲಿ ಕೆಲಸಕ್ಕೆ ಹೋಗುವಂತಾಗಿದೆ. ಹಲವಾರು ಸಮಸ್ಯೆಗಳ ಮಧ್ಯೆ ರೈತನು ಬೆಳೆಗಳನ್ನು ಬೆಳೆದು ಈ ದೇಶಕ್ಕೆ ಹಾಗೂ ರಾಜ್ಯಕ್ಕೆ ನೀಡುತ್ತಿದ್ದರೂ ಸರ್ಕಾರಗಳು ಮಾತ್ರ ರೈತರ ಮೇಲೆ ಗೋಲಿಬಾರ್, ಹಲ್ಲೆ, ದೌರ್ಜನ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ ಹೊರತು ರೈತರ ಸಮಸ್ಯೆಗಳಿಗೆ ಮತ್ತು ಅವರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಯುವಕರು ವ್ಯವಸಾಯದ ಕಡೆ ಗಮನ ಹರಿಸದೆ ನಗರ ಪ್ರದೇಶಗಳಲ್ಲಿ ಬದುಕಲು ಮುಂದಾಗಿದ್ದಾರೆ. ಇನ್ನು ಜಾತಿ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ರಾಜಕಾರಣಿಗಳು ನಿಜವಾದ ಭಯೋತ್ಪಾದಕರಾಗಿದ್ದಾರೆ. ಜಾತಿ ರಾಜಕಾರಣ ವ್ಯವಸ್ಥೆಯನ್ನು ಪೋಷಿಸಿ ಕೃಷಿ ವ್ಯವಸ್ಥೆಯನ್ನು ನಿರ್ಲಕ್ಷಿಸುವ ಇಂತರ ರಾಜಕಾರಣಿಗಳನ್ನು ಕನಿಷ್ಠ ಒಂದು ವಷವಾದರೂ ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ ಮಾತನಾಡಿ ಅನ್ನ ಕೊಡುವ ರೈತನನ್ನು ಸರ್ಕಾರಗಳು ಗೌರವಿಸಿ ಪ್ರತಿ ವರ್ಷ ಜುಲೈ 21 ರಂದು ರೈತರ ದಿನಾಚರಣೆಯೆಂದು ಘೋಷಿಸಿ ರೈತರಿಗಾಗುವ ಅನ್ಯಾಯ, ದೌರ್ಜನ್ಯವೆಸಗುವುದನ್ನು ಬಿಟ್ಟು ರೈತರ ಬೆನ್ನೆಲುಬಾಗಿ ನಿಲ್ಲಬೇಕು ಇಲ್ಲವಾದಲ್ಲಿ ವಿದೇಶಿಗಳ ಮುಂದೆ ಅನ್ನಕ್ಕಾಗಿ ಭಿಕ್ಷೆಬೇಡಬೇಕಾದ ಪರಿಸ್ಥಿತಿ ಒದಗಿ ಬರುವ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಾದ ದೊಡ್ಡಕಾರಿ ವಿಶ್ವನಾಥ್, ಸುಬ್ರಮಣಿ, ವಡ್ಡಹಳ್ಳಿ ಮಂಜುನಾಥ್, ಪ್ರತಾಪ್, ಗಣೇಶ್, ಶೆಟ್ಟಿಕುಂಟ ರಮೇಶ್, ಮಂಜುನಾಥ್, ಹೇಮಾರೆಡ್ಡಿ, ಮುನೆಂಕಟೇಗೊಡ, ಶ್ರೀನಿವಾಸರೆಡ್ಡಿ, ಕೇಶವಮೂರ್ತಿ, ಮುನಿರತ್ನಂ ರೆಡ್ಡಿ, ವೆಂಕಟರಾಮರೆಡ್ಡಿ, ನಡುಪನ್ನ ಸೇರಿದಂತೆ ಇತರೆ ಮುಖಂಡರು ಹಾಗೂ ರೈತರು ಗ್ರಾಮಸ್ಥರು ಹಾಜರಿದ್ದರು.
ರೈತರ ಬದುಕು ಬೀದಿಪಾಲು
ಬಂಗಾರಪೇಟೆ: ದೇಶಕ್ಕೆ ಅನ್ನ ನೀಡುವ ರೈತರು ಇಂದು ಅಕ್ಷರಶಃ ಬೀದಿಪಾಲಾಗುತ್ತಿದ್ದರೂ ಯಾವುದೇ ಸರ್ಕಾರಗಳು ಅವರ ನೆರವಿಗೆ ಧಾವಿಸದೆ ಬರೀ ಬೂಟಾಟಿಕೆ ಮಾತುಗಳಲ್ಲಿ ರೈತರನ್ನು ಮರಳು ಮಾಡುತ್ತಿವೆ, ರೈತರು ತಮ್ಮ ಹಕ್ಕುಗಳನ್ನು ಪಡೆಯುವ ಸಲುವಾಗಿ ರೈತರೆಲ್ಲರೂ ಒಂದಾದಾಗ ಮಾತ್ರ ಸಾಧ್ಯ ಎಂದು ರಾಜ್ಯ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭೆ ರಂಗಮಂದಿರದಲ್ಲಿ ಪ್ರಾಂತ ರೈತ ಸಂಘದ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಸಮ್ಮೇಳನದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಸರ್ಕಾರ ರೈತರ ಪರವಾದ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ ಆದರೆ ಅವುಗಳು ಬರೀ ಪುಸ್ತಕದಲ್ಲಿ ಮಾತ್ರ ದಾಖಲಾಗಿದೆ ವಿನಃ ಇದುವರೆಗೂ ಕಾರ್ಯಗತವಾಗಿಲ್ಲ ಎಂದು ಅಧಿಕಾರಿಗಳ ಧೋರಣೆ ಹಾಗೂ ಜನಪ್ರತಿನಿಧಿಗಳು ರೈತರ ಬಗ್ಗ ತಾಳಿರುವ ನಿರ್ಲಕ್ಷ್ಯ ಧೋರಣೆ ಬಗ್ಗೆ ಕಿರಿಕಾರಿದರು.
 50ವರ್ಷಗಳ ಇತಿಹಾಸದಲ್ಲಿ ಈ ವರ್ಷ ಅತ್ಯಂತ ಕಡಿಮೆ ಮಳೆಯಾಗಿದೆ ಇದರಿಂದ ತಿನ್ನಲು ಅನ್ನ ನೀರಿಲ್ಲದೆ ರೈತರು, ಕೂಲಿ ಕೃಷಿ, ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಕೇಳುವವರೇ ಇಲ್ಲದಾಗಿದೆ ಎಂದು ವಿಷಾದಿಸಿದರು.
ಉದ್ಯೋಗ ಖಾತರಿ ಯೋಜನೆ ಗುತ್ತಿಗೆದಾರರ ಖಾತರಿ ಕಾಮಗಾರಿಯಾಗಿದೆ ಈ ಯೋಜನೆಯಿಂದ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿಲ್ಲ, ಹಲವು ದಶಕಗಳಿಂದ 3500 ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕಾಗಿ ಬಡವರು ಅರ್ಜಿ ಸಲ್ಲಿಸಿದ್ದರೂ ಅದನ್ನು ಅತ್ಯರ್ಥ ಪಡಿಸಿ ಬಡವರಿಗೆ ನ್ಯಾಯ ಕೊಡಿಸಲು ಆಡಳಿತ ಮಂಡಳಿಗಳಿಂದ ಸಾಧ್ಯವಾಗಿಲ್ಲ ಎಂದರೆ ರೈತರ ಬಗ್ಗೆ ಅವರಿಗೆ ಇರುವ ಕಾಳಜಿ ಅರಿವಾಗುತ್ತದೆ. ಆದ್ದರಿಂದ ಯಾವುದೇ ಸಮಸ್ಯೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಮೊದಲು ಸಂಘಟಿತರಾಗಬೇಕು ಆಗಲೇ ಪರಿಹಾರ ಸಿಗಲು ಸಾಧ್ಯ ಎಂದು ಕರೆ ನೀಡಿದರು.
ವೇದಿಕೆ ಮೇಲೆ ಕೆಪಿಆರ್‌ಎಸ್ ತಾಲೂಕು ಸಂಘಟನಾ ಕಾರ್ಯದರ್ಶಿ ಪಿ. ಶ್ರೀನಿವಾಸ್, ಜಿಲ್ಲಾಧ್ಯಕ್ಷ ಸೂರ್ಯನಾರಾಯಣ, ವೆಂಕಟೇಶ್, ರಮೇಶ್, ಮೂರ್ತಿ, ಜಯಲಕ್ಷ್ಮೀ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement