ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅತಿಯಾಯ್ತು ಮಹಿಳೆಯ ಮೇಲಿನ ಅತ್ಯಾಚಾರ

Vishwanath S
Updated On : 23 Jul 2014, 1:10 am

ಕೋಲಾರ: ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜು.24ರಂದು ಗುರುವಾರ ಹಮ್ಮಿಕೊಂಡಿರುವ ಕೋಲಾರ ಬಂದ್‌ಗೆ ಎಲ್ಲಾ ವರ್ಗದ ಜನ ಸಹಕಾರ ನೀಡಬೇಕೆಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ.ಗೀತಾ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪ್ರಗತಿಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಆರು ತಿಂಗಳಲ್ಲಿ 11 ಅತ್ಯಾಚಾರ ಪ್ರಕರಣಗಳು ನಡೆದಿವೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜನರ ಮಧ್ಯೆ ಕೆಲಸ ಮಾಡುವಂಥ ಸಂಘಟನೆಗಳ ಮುಖಂಡರನ್ನು ವಿಶ್ವಾಸಕ್ಕೆ ಪಡೆದು, ಅತ್ಯಾಚಾರ ಪ್ರಕರಣಗಳನ್ನು ತಡೆಯುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿತ್ತು.ಆದರೆ, ಕೇವಲ ಅಧಿಕಾರಿಗಳ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅಕ್ಷೇಪಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಸಹ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ವರ್ಮಾ ಆಯೋಗದ ಶಿಫಾರಸಿನಂತೆ ತ್ವರಿತ ನ್ಯಾಯಾಲಯಗಳನ್ನು ರಚಿಸಿ, ಅವುಗಳ ಕಾರ್ಯನಿರ್ವಹಣೆಯತ್ತ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮ ಸಭೆಗಳನ್ನು ಮಾಡಿ ಜನರಲ್ಲಿ ಅರಿವು ಮೂಡಿಸಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಕೋಲಾರ ಬಂದ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ತ್ರೀಶಕ್ತಿಯನ್ನು ಸಾಬೀತು ಮಾಡಬೇಕೆಂದು ಕೋರಿದರು.
ದಸಂಸ (ಅಂಬೇಡ್ಕರ್ ವಾದ) ಮುಖಂಡ ವಿಜಯಕುಮಾರ್, ಸಿಪಿಎಂ ಮುಖಂಡ ಮತ್ತು ನಗರಸಭೆ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ, ಆಡಳಿತ ಮತ್ತು ವಿರೋಧ ಪಕ್ಷದವರು ಪರಸ್ವರ ಕಾಲು ಎಳೆದುಕೊಂಡು ಜನರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ ಮಾತನಾಡಿ, ಜು.24 ರಂದು ಹಮ್ಮಿಕೊಂಡಿರುವ ಕೋಲಾರ ಜಿಲ್ಲಾ ಬಂದ್‌ಗೆ ವಿದ್ಯಾರ್ಥಿ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಜಾಗೃತಿ ವೇದಿಕೆಯ ಮಮತಾ ರೆಡ್ಡಿ, ಕರವೇ ಮುಖಂಡ ಜಯದೇವ್ ಪ್ರಸನ್ನ, ರಾಜೇಶ್, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ತ್ಯಾಗರಾಜ್, ಆದಿಮ ಸ್ತ್ರೀಶಕ್ತಿ ಸಂಘಟನೆಯ ಪ್ರಭಾವತಿ, ರೈತ ವಿದ್ಯಾರ್ಥಿ ಮುಖಂಡ ಹೂಹಳ್ಳಿ ಪ್ರಕಾಶ್, ಬೀಡಿ ಕಾರ್ಮಿಕರ ಸಂಘದ ನಬೀಬುನ್ಸಿಸ್, ಡಿವೈಎಫ್‌ಐ ತಾಲೂಕು ಅಧ್ಯಕ್ಷ ರಮಣ, ವಕೀಲರ ಸಂಘದ ಸತೀಶ್ ಇದ್ದರು.
ದೌರ್ಜನ್ಯಕ್ಕೆ ಕಡಿವಾಣ ಹಾಕಿ
ಬಾಗೇಪಲ್ಲಿ: ರಾಜ್ಯದಲ್ಲಿ ಸತತವಾಗಿ ಮಹಿಳೆಯರ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ,ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಬೇಕೆಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿದರು. ಡಾ.ಎಚ್.ಎನ್.ವೃತ್ತದಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ ನೂರಾರು ವಿದ್ಯಾರ್ಥಿಗಳು ಅತ್ಯಾಚಾರ ಪ್ರಕರಣಗಳಲ್ಲಿನ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳುವಂತೆ ಆಗ್ರಹಿಸಿದರು. ತಾಲೂಕು ಸಂಚಾಲಕ ಕೆ.ಎನ್.ಬಾಬುರೆಡ್ಡಿ ಮಾತನಾಡಿ, ಮಹಿಳೆಯರಿಗೆ ರಕ್ಷಣೆ ನೀಡಬೇಕಾಗಿರುವ ಗೃಹ ಸಚಿವರು ಅತ್ಯಾಚಾರಿಗಳ ವಿರುದ್ಧ ಹೋರಾಟ ನಡೆಸುವ ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ ನಡೆಸುವಂತೆ ಪೊಲೀಸರಿಗೆ ಸೂಚಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ, ನಗರ ಕಾರ್ಯದರ್ಶಿ ವಿಷ್ಣುವರ್ಧನ್ , ರೆಡ್ಡಪ್ಪ, ರಮ್ಯಾ, ಭವ್ಯಾ, ರೂಪಶ್ರಿ, ಭಾಷಾ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪೊಲೀಸರ ಜತೆ ಕೈ ಜೋಡಿಸಿ
ಚಿಂತಾಮಣಿ: ತಮ್ಮ ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸಬೇಕು. ಅತ್ಯಾಚಾರ-ಮಾನಭಂಗ-ದೌರ್ಜನ್ಯ ತಡೆಗಟ್ಟಲು ಪೊಲೀಸ್ ಇಲಾಖೆಯು ಸದಾ ಸಿದ್ಧ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಇನ್ಸ್‌ಪೆಕ್ಟರ್ ನಂಜಪ್ಪ ತಿಳಿಸಿದರು. ನಗರದ ಪ್ರಗತಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಸುರಕ್ಷತಾ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ದೌರ್ಜನ್ಯವೇಸಗಿದರವ ಮೇಲೆ ಗೂಂಡಾ ಕಾಯ್ದೆ ಹಾಕಲಾಗುವುದು ಎಂದು ತಿಳಿಸಿದರು. ವಕೀಲೆ ಮಮತಾ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ದೇವರ ಸಮಾನ. ಆದರೆ, ಈಗ ಹೆಣ್ಣನ್ನು ಕೆಲವರು ಕಾಮತೃಷೆಗೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದರು. ಈ ವೇಳೆ ಎಸ್‌ಐ ಬಸವರಾಜು, ಪ್ರಾಂಶುಪಾಲ ರಾಮಚಂದ್ರಾರೆಡ್ಡಿ, ವಕೀಲರಾದ ಕಲ್ಪನಾ, ಶಿಕ್ಷಕ ರಮೇಶ್, ಪದ್ಮಾವತಮ್ಮ, ಎಬಿವಿಪಿ ಮುಖಂಡ ಮಂಜುನಾಥ್, ಸುರೇಶ್ ಮತ್ತಿತರರು ಇದ್ದರು.
ಕಾಮಣ್ಣರ ವಿರುದ್ಧ ಪ್ರತಿಭಟನೆ
ಕೋಲಾರ: ರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರವನ್ನು ಖಂಡಿಸಿ ಜಯಕರ್ನಾಟಕ ಸಂಘನೆಯು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.  ಅತ್ಯಾಚಾರ ಪ್ರಕರಣಗಳು ಒಂದರ ಮೇಲೊಂದರಂತೆ ನಡೆಯುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿದ್ರೆಗೆ ಜಾರಿವೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್ ಆರೋಪಿಸಿದರು. ಅತ್ಯಾಚಾರಿಗೆ ಗುಂಡಿಕ್ಕಿ: ತಪ್ಪಿತಸ್ಥರನ್ನು ಗುಂಡಿಕ್ಕಿ ಕೊಲ್ಲಬೇಕು. ಇನ್ನು ಮುಂದೆ ಯಾರ ಮೇಲೆಯೂ ಅತ್ಯಾಚಾರ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಮುಖಂಡರು ಒತ್ತಾಯಿಸಿದರು.  ಜಿಲ್ಲಾ ಉಪಾಧ್ಯಕ್ಷ ಕೀಲುಕೋಟೆ ಆಂಜಿನಪ್ಪ, ಪ್ರಧಾನ ಕಾರ್ಯದರ್ಶಿ  ಮಹಮದಾಲಿ,  ಸಂಚಾಲಕ ಜಿ.ಜಿ.ಸುರೇಶ್, ಸಂಘಟನಾ ಕಾರ್ಯದರ್ಶಿ ಬಿ.ವಿ.ಶಿವಕುಮಾರ್, ಕೆ.ಎಂ.ಗೋವಿಂದರಾಜು, ಆಟೋ ಘಟಕದ ಎಂ.ವೆಂಕಟಪ್ಪ ಇದ್ದರು.
ಅತ್ಯಾಚಾರ ತಡೆ ಕಾರ್ಯಾಗಾರ
ಟೇಕಲ್: ಟೇಕಲ್‌ನ ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಹೆಣ್ಣು ಮಕ್ಕಳು ಮತ್ತು ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸಲಾಯಿತು. ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಷೀದ್ ಖಾನ್ ಮಾತನಾಡಿ, ಅಪರಿಚಿತರಾಗಲಿ ಯಾರೇ ಆಗಲಿ ಹೆಣ್ಣು ಮಕ್ಕಳ ಜೊತೆ ಅಸಭ್ಯ ವರ್ತನೆ ತೋರಿದಲ್ಲಿ ಅಥವಾ ಕಿರುಕುಳ ನೀಡಿದಲ್ಲಿ ಠಾಣೆಗೆ ತಿಳಿಸಿ. ಹೆಣ್ಣು ಮಕ್ಕಳು ಪ್ರೀತಿ ಪ್ರೇಮದ ಬಲೆಯೊಳಗೆ ಸಿಲುಕಬಾರದು. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಪೋಷಕರು, ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಮುಖ್ಯ ಪೇದೆ ಚಂದ್ರಶೇಖರ್ ರಾವ್ ಹಾಗೂ ಪೇದೆಗಳಾದ ಮುನಿಸ್ವಾಮಿ, ಬಾಬು ಮುಂತಾದವರಿದ್ದರು.
ತಪ್ಪು ಗ್ರಹಿಕೆಯಿಂದ ಪ್ರತಿಭಟನೆ
ಕೋಲಾರ: ಅತ್ಯಾಚಾರ ಪ್ರಕರಣಗಳ ಹಿನ್ನಲೆಯಲ್ಲಿ ಜನಜಾಗೃತಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನಿಸಿಲ್ಲವೆಂದು ಪ್ರಗತಿಪರ ಸಂಘಟನೆಗಳ ಮುಖಂಡರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಮತ್ತು ಅಂಗನವಾಡಿ ಸಂಘಟನೆಯ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಸಿ, ಪ್ರತಿಭಟಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟಲು ಕಾನೂನು ಅರಿವು ಮತ್ತು ನೆರವು ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರಗತಿಪರ ಸಂಘಟನೆಗಳಿಗೆ ಆಹ್ವಾನ ನೀಡಿಲ್ಲವೆಂದು ಮುಖಂಡರು ಏಕಾಏಕಿ ಸಭೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಉದ್ವಿಗ್ನ ವಾತಾವರಣ ಉಂಟಾಯಿತು. ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ಮುಖಂಡರಾದ ವಿಜಯಕುಮಾರ್, ರೈತ ಸಂಘದ ನಾರಾಯಣಗೌಡ, ವಿದ್ಯಾರ್ಥಿ ಮುಖಂಡ ಹೂವಳ್ಳಿ ನಾಗರಾಜ್ ಇನ್ನಿತರರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶಕುಂತಲಾ ಮಾತನಾಡಲು ಯತ್ನಿಸಿದಾಗಮಾತಿನ ಚಕಮಕಿ ಜೋರಾಯಿತು. ಪರಿಸ್ಥಿತಿ ಅರಿತ ಮುಖಂಡರು ವಾತಾವಣ ತಿಳಿಗೊಳಿಸಿ ಎರಡು ಗುಂಪುಗಳನ್ನು ಹೊರೆಗೆ ಕರೆ ತಂದ ಮೇಲೆ ಸಭೆ ಮುಂದುವರೆಯಿತು.
ಸರಣಿ ಅತ್ಯಾಚಾರ ವಿರುದ್ಧ ಪ್ರತಿಭಟನೆ
ಕೋಲಾರ: ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಿಗ್ರಹಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಸರ್ಕಾರ ವಿರುದ್ಧ  ಘೋಷಣೆ ಕೂಗಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಮುಖಂಡರು, ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಬಯಾ ಮೇಲಿನ ಅತ್ಯಾಚಾರ ಪ್ರಕರಣ ನೆನಪಿಸುವ ರೀತಿಯ ಘಟನೆ ಬೆಂಗಳೂರಿನ ಪುಲಕೇಶಿ ನಗರದಲ್ಲಿ ನೆಡೆದಿದೆ. ಇದರ ಬೆನ್ನಲ್ಲೇ ಮಾರತ್ ಹಳ್ಳಿ ಬಳಿಯ ಖಾಸಗಿ  ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ. ಬೈಂದೂರಿನ ಆಲಂದೂರಿನ ಪಿಯುಸಿ ವಿದ್ಯಾರ್ಥಿನಿಯರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದರೂ ಸರ್ಕಾರ ಆರೋಪಿಗಳನ್ನು ಗುಂಡಾ ಕಾಯಿದೆಯಡಿ ಬಂಧಿಸಲು ಮೀನ ಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಸುನಿಲ್, ಸಂಘಟನಾ ಕಾರ್ಯದರ್ಶಿ  ಪ್ರಶಾಂತ್, ನಗರ ಕಾರ್ಯದಶಿ ಹರೀಶ್ ಇತರರು ಇದ್ದರು. ರಸ್ತೆ ತಡೆಯಿಂದಾಗಿ ಸುಮಾರು ಒಂದು ಗಂಟೆ ಕಾಲ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ರಾಜಿಗೆ ಜೈ ಎನ್ನುತ್ತಿದ್ದವರಿಗೆ ಸಂಕಟ!
ಕೋಲಾರ: ಸರಣಿ ಅತ್ಯಾಚಾರ ಪ್ರಕರಣಗಳು ಸಂಭವಿಸುತ್ತಿದ್ದಂತೆ ಪೊಲೀಸರು ತುಂಬಾ ಪರಿಣಾಮಕಾರಿಯಾಗಿ ಕೆಲಸಕ್ಕೆ ಮುಂದಾಗಿರುವುದು ಮಧ್ಯವರ್ತಿಗಳಿಗೆ ಸಂಕಟ ತಂದಿಟ್ಟಿದೆ.
ಕೊಲೆ, ಲೂಟಿ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಿ, ಜೇಬು ತುಂಬಿಸಿಕೊಳ್ಳುತ್ತಿದ್ದ ಮಧ್ಯವರ್ತಿಗಳು ಇದೀಗ ನಿರುದ್ಯೋಗಿಗಳಾಗುತ್ತಿದ್ದಾರೆ. ಮಧ್ಯವರ್ತಿಗಳಿಂದಾಗಿ ಪೊಲೀಸರು ಕೇಸ್‌ಗಳನ್ನು ದಾಖಲಿಸದೆ ಇತ್ಯರ್ಥ ಮಾಡುತ್ತಿದ್ದಾರೆಂದು ಕೆಲವು ಸಂಘಟನೆಗಳು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣದಲ್ಲಿ ರಾಜಿ ಇಳ್ಲ. ಕಾನೂನು ಪ್ರಕಾರವೇ ಸಂತ್ರಸ್ತರು ಮತ್ತು ಆರೋಪಿಗಳು ನ್ಯಾಯ ಪಡೆಯಲಿ ಎಂದು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಇತ್ತೀಚೆಗೆ ಫರ್ಮಾನು ಹೊರಡಿಸಿದ್ದಾರೆ. ಇದು ಮಧ್ಯವರ್ತಿಗಳಿಗೆ ನುಂಗಲಾರದ ತುಪ್ಪಾಗಿದೆ.
ಕೆಲವು ವ್ಯಕ್ತಿಗಳು ಮುಖಂಡನೆಂಬ ಮುಖವಾಡ ಧರಿಸಿ, ನೊಂದವರ ಅಸಹಾಯಕತೆ ಹಾಗೂ ದುಷ್ಟರ ಬಳಿ ಇರುವ ಹಣವನ್ನು ತಮ್ಮ ಜೇಬಿಗೆ ಹಾಕಿಕೊಳ್ಳಲು ಪರಿಸ್ಥಿತಿಯನ್ನು ಉಚಿತ ಎಟಿಎಂ ಕಾರ್ಡುಗಳಂತೆ ಬಳಕೆ ಮಾಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ನಿಷ್ಠಾವಂತ ಅಧಿಕಾರಿಗಳು ಮುಂದಾಗಿರುವುದು ಮಧ್ಯವರ್ತಿಗಳಿಗೆ ಅಪಥ್ಯವಾಗಿದೆ. ಹಾಗಾಗಿ, ಅಧಿಕಾರಿಗಳನ್ನು ಟಾರ್ಗೆಟ್ ಮಾಡಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಮವಾರದಿಂದ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ, ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಕೇಳಿ ಬಂದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಸ್‌ಪಿ ಅವರು ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೂ ಮಧ್ಯವರ್ತಿಗಳ ಒತ್ತಡಕ್ಕೆ ಮಣಿದು ಠಾಣೆಯೊಂದರಲ್ಲಿ ಯುವಕ-ಯುವತಿಯ ಪ್ರಕರಣವನ್ನು ಭಾರೀ ಮೊತ್ತದ ಹಣದ ಮೂಲಕ ರಾಜಿ ಮಾಡಿದ್ದಾರೆಂಬ ವದಂತಿ ಎಲ್ಲಡೆ ಹರಡಿದೆ. ಇದನ್ನು ತಿಳಿದ ಕೆಲವು ಸಂಘಟನೆಗಳ ಮುಖಂಡರು ತಮಗೂ ಇದೇ ರೀತಿ ರಾಜಿ ಸಂಧಾನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ಧಮಕಿ ಹಾಕಿದ್ದಾರೆಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement