ಜಿಲ್ಲಾಧಿಕಾರಿ ವಿಶಾಲ್ ವರ್ಗಕ್ಕೆ ಆಗ್ರಹ
ಚಿಕ್ಕಬಳ್ಳಾಪುರ: ದಲಿತ ವಿರೋಧಿ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಅವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.
ತಾಲೂಕು ಕಚೇರಿಯ ಮುಂದೆ ಧರಣಿ ಕುಳಿತ ಮುಖಂಡರು, ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ. ಸರ್ಕಾರಿ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಕಬಳಿಸುತ್ತಿದ್ದಾರೆ. ಸರ್ಕಾರದಿಂದ ಅರ್ಹ ಫಲಾನುಭವಿಗಳಿಗೆ ಸೇರಬೇಕಾದ ಸವಲತ್ತುಗಳು ಉಳ್ಳವರ ಪಾಲಾಗುತ್ತಿದೆ. ಇದನ್ನು ನಿವಾರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಆಕ್ರಮವಾಗಿ ಮರಳು ದಂಧೆಗೆ ಕುಮ್ಮಕ್ಕು ನೀಡುತ್ತಿರುವ ಜಿಲ್ಲಾ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಭೂ ಆಕ್ರಮಗಳು ಮತ್ತು ಕಾನೂನು ಬಾಹಿರವಾಗಿ ಮತ್ತು ದಲ್ಲಾಳಿಗಳ ಜೊತೆ ಶಾಮೀಲಾಗಿ ಪಿಟಿಸಿಎಲ್, ಎಲ್ಎನ್ಟಿ., ಆರ್ಎ, ಪ್ರಕರಣಗಳ ಅಕ್ರಮ ಆದೇಶಗಳನ್ನು ನೀಡುತ್ತಿರುವ ಉಪ ವಿಭಾಗಾಧಿಕಾರಿ ಕೆ.ಟಿ.ಶಾಂತಲಾ ವಿರುದ್ಧ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ದಲಿತ ಸಂಘಟನೆಗಳ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷ ಬಿ.ವಿ.ಆನಂದ್, ವೇಣು ಮುಂತಾದವರು ವಹಿಸಿದ್ದರು.
ಶಿಡ್ಲಘಟ್ಟದಲ್ಲಿ
ಶಿಡ್ಲಘಟ್ಟ: ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾಧಿಕಾರಿ ಡಾ. ವಿಶಾಲ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಸಿ. ರಾಜಾಕಾಂತ್, ಜಿಲ್ಲಾಧಿಕಾರಿಗಳು ಜಿಲ್ಲೆಯ ಆಡಳಿತವನ್ನು ಚುರುಕುಗೊಳಿಸಲು ವಿಫಲರಾಗಿದ್ದಾರೆ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ನ್ಯಾಯವನ್ನು ದೊರಕಿಸಿಕೊಡುವಲ್ಲಿ ವಿಫಲರಾಗಿ ಕೇವಲ ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಸಮಿತಿ ಸದಸ್ಯ ಸಿ.ಎಂ. ಮುನಿಯಪ್ಪ ಮಾತನಾಡಿ, ಜಿಲ್ಲೆಯಲ್ಲಿ ದಲಿತರನ್ನು ದಮನ ಮಾಡಲು ಹೊರಟಿರುವ ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಖಂಡಿಸಿದರು. ತಾಲೂಕು ಅಧ್ಯಕ್ಷ ಎನ್.ಎ. ವೆಂಕಟೇಶ್, ಕಾರ್ಯದರ್ಶಿ ನಾಗನರಸಿಂಹ, ನರಸಿಂಹಮೂರ್ತಿ, ಟಿ.ಎ. ಚಲಪತಿ, ಗೊರಮಡಗು ನಾರಾಯಣಸ್ವಾಮಿ, ಸಿ.ಎಂ. ಲಕ್ಷ್ಮೀನಾರಾಯಣ, ಸೀತಪ್ಪ ಇದ್ದರು.
ಚಿಂತಾಮಣಿಯಲ್ಲಿ
ಚಿಂತಾಮಣಿ: ಜಿಲ್ಲಾಧಿಕಾರಿ ಆರ್. ವಿಶಾಲ್ರ ವರ್ಗಾವಣೆಗೆ ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸಾಂಕೇತಿಕ ಧರಣಿ ನಡೆಸಿದರು.
ಸಮಿತಿಯ ಜಿ. ನಾರಾಯಣಸ್ವಾಮಿ ಮಾತನಾಡಿ, ದಲಿತ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಸಮಿತಿಯ ಕಲ್ಲಹಳ್ಳಿ ಕೃಷ್ಣಮೂರ್ತಿ, ಜಂಗಶೀಗಹಳ್ಳಿ ದೇವರಾಜ್, ಶ್ರೀರಂಗಪ್ಪ, ನರಸಿಂಹಮೂರ್ತಿ, ಜೆ.ಜೆ. ಕಾಲೋನಿ ಶ್ರೀರಾಮಪ್ಪ, ನಾರಾಯಣಪ್ಪ ಇದ್ದರು.