ತಿಂಗಳಿಗೊಮ್ಮೆ ಪೋಷಕರ ಸಭೆ ನಡೆಸಿ
ಕೋಲಾರ: ಪ್ರತಿ ತಿಂಗಳು ಶಾಲೆಯಲ್ಲಿ ಪೋಷಕರ ಸಭೆಯನ್ನು ಕಡ್ಡಾಯವಾಗಿ ನಡೆಸಿ ಮಕ್ಕಳ ಪ್ರಗತಿ ಹಾಗೂ ಚಲನವಲನಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಮಕ್ಕಳಿಗೆ ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಜಿಲ್ಲಾಧಿಕಾರಿ ಡಿ.ಕೆ.ರವಿ ಸಲಹೆ ನೀಡಿದರು.
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ 2013-14ನೇ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಕಂಪ್ಯೂಟರ್ ಕೊಡುಗೆಯಾಗಿ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳಿಂದ ಹೆಣ್ಣು ಮಕ್ಕಳು ನೆಮ್ಮದಿಯಿಂದ ಜೀವನ ನಡೆಸುವುದಕ್ಕೆ ಕಷ್ಟವಾಗುತ್ತಿದೆ. ಪ್ರತಿಯೊಬ್ಬರು ಈ ಕೃತ್ಯಗಳನ್ನು ಖಂಡಿಸುವುದರ ಜೊತೆಗೆ ತಡೆಗಟ್ಟಲು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಇಂತಹ ಘಟನೆಗಳನ್ನು ತಡೆಯಲು ಪ್ರತಿ ಗ್ರಾಮದಲ್ಲೂ ಗ್ರಾಮಸಭೆ ನಡೆಸುವುದು, ಶಾಲಾ-ಕಾಲೇಜುಗಳಲ್ಲಿ ಪೊಲೀಸ್ ಇಲಾಖೆ ಸಭೆ ನಡೆಸಿ ಹೆಣ್ಣು ಮಕ್ಕಳಿಗೆ, ಪೋಷಕರಿಗೆ ಮಹಿಳಾ ಕಾನೂನುಗಳ ಬಗ್ಗೆ, ಇಂತಹ ಘಟನೆಗಳು ನಡೆಯದಂತೆ ವಹಿಸಬೇಕಾದ ಮುಂಜಾಗ್ರತೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಅಕ್ಕಪಕ್ಕದವರು, ಗೊತ್ತಿರುವವರು, ಸಂಬಂಧಿಕರು, ಸ್ನೇಹಿತರೇ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಾಗಿರುವುದರಿಂದ ಶಿಕ್ಷಕರು ಶಾಲೆಯಲ್ಲಿ ಈ ಬಗ್ಗೆ ಮಕ್ಕಳನ್ನು ಎಚ್ಚರಿಸಬೇಕು. ಪೋಷಕರು ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಶಾಲೆಗಳಲ್ಲಿ ತಿಂಗಳಿಗೊಮ್ಮೆ ಪೋಷಕರ ಸಭೆ ಕರೆದು ಮಕ್ಕಳಿಗೆ ಅರಿವು, ಮಾಹಿತಿ ನೀಡುವ ಧೈರ್ಯ ತುಂಬಬೇಕು, ಸ್ವಯಂ ಸೇವಾ ಸಂಘಗಳು, ಸ್ತ್ರೀಶಕ್ತಿ ಸಂಘಗಳ ಸದಸ್ಯರನ್ನು ಕರೆಸಿ ಮಕ್ಕಳಿಗೆ ನೀತಿ ಬೋಧನೆ ಮಾಡಿಸಬೇಕು. ಜಿಲ್ಲೆ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಪ್ರಥಮ ಸ್ಥಾನದ ಹತ್ತಿರಕ್ಕೆ ಬರಲು ಸಾಧ್ಯವಾಗಿಲ್ಲ. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಈ ಬಾರಿ ಅಂತಹ ಸಾಧನೆ ಮಾಡುವಂತೆ ಮುಖ್ಯ ಶಿಕ್ಷಕರಿಗೆ ಕರೆ ನೀಡಿದರು.
ನಗರ ಠಾಣೆ ವೃತ್ತ ನಿರೀಕ್ಷಕ ಶಿವಕುಮಾರ್ ಮಾತನಾಡಿ, ರಾಜಕೀಯ, ಹಣ, ಜಾತಿ ಬಲದಿಂದಾಗಿ ಅತ್ಯಾಚಾರ ಪ್ರಕರಣಗಳನ್ನು ಮುಚ್ಚಿ ಹಾಕಲು ಅವಕಾಶ ನೀಡಬೇಡಿ. ಇಂತಹ ಸಂಗತಿ ಗಮನಕ್ಕೆ ಬಂದರೆ ಕೂಡಲೇ ದೂರು ನೀಡಿ. ದೆಹಲಿ ನಿರ್ಭಯಾ ಪ್ರಕರಣದ ನಂತರ ಸರ್ಕಾರ ಮಹಿಳಾ ದೌರ್ಜನ್ಯ ಕಾಯಿದೆಯನ್ನು ಬಲಗೊಳಿಸಿದೆ. ಮಹಿಳೆಯರು ತೊಂದರೆ ಕಂಡು ಬಂದ ತಕ್ಷಣ ಧೈರ್ಯದಿಂದ ದೂರು ನೀಡಬೇಕು. ಮೊಬೈಲ್, ಇಂಟರ್ನೆಟ್ ಬಳಕೆ ಕುರಿತು ಪರಿಶೀಲಿಸುತ್ತಿರಬೇಕೆಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ವಿ.ಪದ್ಮನಾಭ್, ಶಿಕ್ಷಣಾಧಿಕಾರಿಗಳಾದ ಕೆ.ಎಂ.ಜಯರಾವರೆಡ್ಡಿ, ಎ.ಎನ್.ನಾಗೇಂದ್ರಪ್ರಸಾದ್, ವಿಷಯ ಪರಿವೀಕ್ಷಕ ಬಾಬು ಜನಾರ್ದನನಾಯ್ಡು, ಎಚ್.ವೆಂಕಟಸ್ವಾಮಿ, ರಾಜಣ್ಣ, ಮಲ್ಲಿಕಾರ್ಜುನಾಚಾರಿ, ಸಿ.ಆರ್.ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಜಗದೀಶ್, ಸುಬ್ರಹ್ಮಣ್ಯಂ, ಕೃಷ್ಣಮೂರ್ತಿ, ರಾಘವೇಂದ್ರ, ಜಯರಾಜ್, ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತಮಠ್, ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಗೋಪಾಲರೆಡ್ಡಿ ಇದ್ದರು.