ಕಸಕ್ಕೆ ಸಿಬ್ಬಂದಿಯಿಂದ ಬೆಂಕಿ : ಆಕ್ರೋಶ
ಚಿಂತಾಮಣಿ: ನಗರಸಭೆ ಕಾರ್ಮಿಕರು ರಸ್ತೆ ಕಸವನ್ನು ಗುಡಿಸಿ ಕಂಟೈನರ್ಗೆ ಹಾಕಬೇಕು. ಆದರೆ, ನಗರದ ವಾರ್ಡ್19ರಲ್ಲಿ ಕಸವನ್ನು ತೆಗೆಯುವುದರಲ್ಲಿ ನಿರ್ಲಕ್ಷ್ಯ ವಹಿಸುವುದಕ್ಕೆ ತಾಜಾ ಉದಾಹರಣೆಯೆಂಬಂತೆ ರಸ್ತೆಯ ಉದ್ದಕ್ಕೂ ಸಣ್ಣ ಸಣ್ಣ ಗುಡ್ಡೆಗಳನ್ನು ಮಾಡಿ ಬೆಂಕಿ ಹಚ್ಚುತ್ತಿದ್ದಾರೆ. ಈ ವಿಷಯವನ್ನು ಹಲವು ಬಾರಿ ನಗರಸಭೆ ಆರೋಗ್ಯಾಧಿಕಾರಿ ಪ್ರದೀಪ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಕಸವನ್ನು ರಸ್ತೆ ಬದಿ ಗುಡ್ಡೆಗಳನ್ನಾಗಿ ಹಾಕಿ ಬೆಂಕಿ ಇಟ್ಟು ತಮ್ಮ ಕೆಲಸ ಮುಗುದಿದೆಯೆಂದು ಹೊರಟು ಹೋಗುತ್ತಿದ್ದು, ಬೆಂಕಿಯಿಂದ ಆಗುವ ಅವಘಡಗಳಿಗೆ ಯಾರು ಹೊಣೆ? ಅಲ್ಲದೆ, ದುರ್ನಾತ ಬೀರಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕಿರಿ ಕಿರಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.