ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಮುಕರ ವಿರುದ್ಧ ಅರಿವಿನ ಸಮರ

Mainashree
Updated On : 25 Jul 2014, 11:49 am

ಕೋಲಾರ: ಕಾಮುಕರ ಕಾಟದಿಂದ ಬೆಚ್ಚಿಬಿದ್ದಿದ್ದ ಜಿಲ್ಲೆಯ ಜನತೆ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದ್ದರೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮ ಮುಂದುವರೆದಿದೆ.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆದಿದ್ದು ಶಿಕ್ಷಣ ಇಲಾಖೆಯಿಂದ ಶಾಲಾ-ಕಾಲೇಜುಗಳಲ್ಲಿ ಚರ್ಚೆ, ಸಂವಾದಗಳು ಮುಂದುವರೆದಿವೆ. ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದ ಕೊಂಚ ಮಟ್ಟಿಗೆ ಪುಂಡರ ಕಾಟ ತಪ್ಪಿದಂತೆ ಕಾಣುತ್ತಿದ್ದರೂ ಜನತೆಯಲ್ಲಿ ಸದಾ ಜಾಗ್ರತೆ ಇರಬೇಕೆಂಬ ಉದ್ದೇಶದಿಂದ ಸರಣಿಯೋಪಾದಿಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕಾರ್ಯಕ್ರಮದಿಂದ ಜನತೆ ಸದಾ ಜಾಗೃತರಾಗಿದ್ದು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಜವಾಬ್ದಾರಿಯಿಂದ ವರ್ತಿಸುವುದು ಸಹ ಕರ್ತವ್ಯವಾಗಿದೆ.
ಕೋಲಾರ ನಗರದ ಕೆಲ ಕಾಲೇಜುಗಳ ಬಳಿ ಪುಂಡರ ಅಲೆದಾಟ ಇನ್ನು ತಪ್ಪಿಲ್ಲ, ಪೊಲೀಸರು ಶಾಲಾ ಕಾಲೇಜುಗಳ ಬಳಿ ಹೆಚ್ಚಿನ ನಿಗಾ ವಹಿಸಬೇಕು, ಗಸ್ತು ತಿರುಗಬೇಕೆಂಬ ಸಲಹೆಗಳು ಕೇಳಿ ಬರುತ್ತಿದ್ದು ಅಧಿಕಾರಿಗಳು ಇತ್ತ ಗಮನ ಹರಿಸುವ ಮೂಲಕ ವಿದ್ಯಾರ್ಥಿನಿಯರ ರಕ್ಷಣೆಗೆ ಬದ್ಧರಾಗಬೇಕಾಗಿದೆ. ಇನ್ನು ಕೆಲ ಕಾಲೇಜಿನಲ್ಲಿ ವಿಕೃತ ಸ್ವಭಾವದ ಪಡ್ಡೆ ಹುಡುಗರು ಪ್ರತಿನಿತ್ಯ ಹೆಣ್ಣು ಮಕ್ಕಳನ್ನು ಒಂದಲ್ಲ ಒಂದು ರೀತಿ ಕಾಡುವುದಲ್ಲದೆ ಜೀವ ಬೆದರಿಕೆ ಹಾಕುವ ಮೂಲಕ ಪ್ರಕರಣಗಳು ಬೆಳಕಿಗೆ ಬರುವುದನ್ನು ತಪ್ಪಿಸುತ್ತಿರುವ ಬಗ್ಗೆಯೂ ಪೊಲೀಸರು ಗುಪ್ತಚಾರರಿಂದ ಮಾಹಿತಿ ಸಂಗ್ರಹಿಸಿ, ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಪ್ರಜ್ಞಾವಂತ ನಾಗರಿಕರು ಪೊಲೀಸ್ ಅಧಿಕಾರಿಗಳನ್ನು ಕೋರಿದ್ದಾರೆ.
ನಗರದ ಕೆಲ ಕಾಲೇಜಿನ ವಿದ್ಯಾರ್ಥಿನಿಯರು ನಾಪತ್ತೆ ಆಗಿರುವ ಪ್ರಕರಣಗಳ ಬಗ್ಗೆಯೂ ಸಹಪಾಠಿಗಳಲ್ಲಿ ಅರಿವು ಮೂಡಿಸಬೇಕು, ಪ್ರತಿ ತಿಂಗಳು ಪೋಷಕರ ಸಭೆಯನ್ನು ಏರ್ಪಡಿಸಿ ಮಕ್ಕಳ ವಿಚಾರವಾಗಿ ಚರ್ಚಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕೆಂಬ ಸಲಹೆ ಕೇಳಿ ಬಂದಿದೆ.
ವೇಮಗಲ್ ಕಾಲೇಜಿನಲ್ಲಿ ಸಭೆ: ತಾಲೂಕಿನ ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ನಡೆಯದಂತೆ ಹೆಣ್ಣು ಮಕ್ಕಳು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವೇಮಗಲ್ ಪಿಎಸ್‌ಐ ಯಶ್ವಂತ್ ಅರಿವು ಮೂಡಿಸಿದರು.
ಕಾಲೇಜಿನ ಎನ್‌ಎಸ್‌ಎಸ್ ಘಟಕ, ಗ್ರಾಮದ ಕರವೇ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಲೇಜಿಗೆ ಬರುವ ಹೆಣ್ಣು ಮಕ್ಕಳು ಪ್ರೀತಿ, ಪ್ರೇಮದ ಬಲೆಯೊಳಗೆ ಸಿಲುಕಬಾರದು, ಅಪರಿಚಿತರಾಗಲಿ ಯಾರೇ ಆಗಲಿ ನಿಮ್ಮೊಂದಿಗೆ ಅಸಭ್ಯ ವರ್ತನೆ ತೋರಿದಲ್ಲಿ ಅಥವಾ ನಿಮಗೆ ಕಿರುಕುಳ ನೀಡಿದಲ್ಲಿ ಕೂಡಲೇ ಪೊಲೀಸ್ ಠಾಣೆ, ಪೋಷಕರಿಗೆ ಅಥವಾ ಶಿಕ್ಷಕರಿಗೆ ಮಾಹಿತಿ ನೀಡಬೇಕೆಂದರು.
ಪ್ರಾಂಶುಪಾಲ ವರದರಾಜ್ ಅಧ್ಯಕ್ಷತೆ ವಹಿಸಿದ್ದು, ಎನ್‌ಎಸ್‌ಎಸ್ ಶಿಬಿರಾಧಿಕಾರಿ ವೆಂಕಟರಮಣಪ್ಪ, ಉಪನ್ಯಾಸಕರಾದ ರಾಮಾಂಜಿ, ಮಂಜುಳಾ, ಶೃತಿ, ಮಂಜುನಾಥಸ್ವಾಮಿ, ಸರವಣಕುಮಾರ್, ಸುಬ್ರಹ್ಮಣ್ಯಂ ಹೆಗಡೆ, ಪಾಷ, ವೇಮಗಲ್ ಕರವೇ ಮುಖಂಡರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement