ಕೋಲಾರ ಬರಪೀಡಿತ ಜಿಲ್ಲೆಯಾಗಿ ಘೋಷಿಸಿ: ಬಿಜೆಪಿ ರೈತ ಮೋರ್ಚಾ
ಕೋಲಾರ: ಈ ಬಾರಿಯು ಮಳೆ ಕೈಕೊಟ್ಟಿರುವುದರಿಂದ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆಯ ಜೊತೆಗೆ ರೈತರು ಬಿತ್ತನೆ ಮಾಡಿರುವ ಬೆಳೆಯನ್ನು ಉಳಿಸಿಕೊಳ್ಳುವುದಕ್ಕೆ ಕಷ್ಟವಾಗಿರುವುದರಿಂದ ಕೋಲಾರ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಶುಕ್ರವಾರ ಪತ್ರಿಕಾಗೋಷ್ಠಿಲ್ಲಿ ಮಾತನಾಡಿದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆಂಬೋಡಿ ನಾರಾಯಣಸ್ವಾಮಿ, ಜು. 29ರಂದು ಜಿಲ್ಲಾ ಬಿಜೆಪಿ ಮುಖಂಡರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಕೋಲಾರ ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಆಗ್ರಹಿಸುವುದಾಗಿ ತಿಳಿಸಿದರು. ಗೋ ಶಾಲೆ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ ಸಲಕರಣೆಗಳಿಗೆ ರಿಯಾಯಿತಿ, ರಸಗೊಬ್ಬರಕ್ಕೆ ಸಬ್ಸಡಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದರು. ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಖಂಡಿಸಿ ತಾಲೂಕು ಕೇಂದ್ರಗಳ ಬೆಸ್ಕಾಂ ಎಇಇ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾ ಉಸ್ತುವಾರಿ ಹೂಹಳ್ಳಿ ಚಲಪತಿ, ಟಿ.ವಿ.ರವಿ, ಮಾಗೇರಿ ನಾರಾಯಣಸ್ವಾಮಿ ಇದ್ದರು.
ಅತಿಸಾರ ಭೇದಿ ನಿಯಂತ್ರಣಾ ಪಾಕ್ಷಿಕ
ಚಿಕ್ಕಬಳ್ಳಾಪುರ: ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಆದೇಶದನ್ವಯ ಜುಲೈ 28ರಿಂದ ಆಗಸ್ಟ್ 9 ರವರೆಗೆ ಜಿಲ್ಲೆಯಾದ್ಯಂತ ಅತಿಸಾರ ಬೇದಿ ನಿಯಂತ್ರಣ ಪಾಕ್ಷಿಕವನ್ನು ಆಚರಿಸಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ವಿ. ರಂಗಸ್ವಾಮಿ ತಿಳಿಸಿದ್ದಾರೆ. ಅವರು ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಮೊದಲನೇ ವಾರದಲ್ಲಿ ಆಶಾ ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಿ ಮಕ್ಕಳನ್ನು ಸಾಮಾನ್ಯವಾಗಿ ಕಾಡುವ ಅತಿಸಾರ ಬೇಧಿಯನ್ನು ನಿಯಂತ್ರಿಸುವ ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ. ಎರಡನೇ ವಾರದಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಶಾಲೆಗಳಿಗೆ ಭೇಟಿ ನೀಡಿ ಶುಚಿತ್ವ ಕಾಪಾಡುವ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡುವರು ಎಂದರು. ಜಿಲ್ಲಾ ಮಟ್ಟದಲ್ಲಿ ಜು.28ರಂದು ನಗರದ ಜಿಲ್ಲಾಸ್ಪತ್ರೆಯಲ್ಲಿ ಬೆಳಗ್ಗೆ 10 ಗಂಟೆಗೆ ಈ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದೆಂದು ತಿಳಿಸಿದಲ್ಲದೆ, ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ಜಿ.ಪಂ. ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ವಿಕಲಚೇತನರ ಸರ್ವೆ ಇಂದು
ಗುಡಿಬಂಡೆ: ಪಟ್ಟಣದ ಎಪಿಡಿ ವಿಕಲ ಚೇತನ ಸಂಸ್ಥೆ ಸಹಯೋಗದಲ್ಲಿ ಸ್ಥಳೀಯ ಪಪಂನಿಂದ ಪಂಚಾಯ್ತಿ ಪರಿಮಿತಿಯಲ್ಲಿ ವಿಕಲ ಚೇತನರ ಸರ್ವೇ ಕಾರ್ಯ ಹಮ್ಮಿಕೊಳ್ಳಲಾಗಿದೆ. ಜು.26 ರಂದು ನಡೆಯಲಿರುವ ಸರ್ವೇ ಕಾರ್ಯಕ್ರಮದಲ್ಲಿ ವಿವರ ಸಂಗ್ರಹಣೆಗಾಗಿ ಬರುವ ಕಾರ್ಯಕರ್ತರಿಗೆ ಸೂಕ್ತ ಮಾಹಿತಿ ಒದಗಿಸಿ ಸಹಕರಿಸಬೇಕೆಂದು ಪಪಂ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ಕೋರಿದ್ದಾರೆ.