ಗೃಹೋಪಯೋಗಿ ವಸ್ತು ನಾಶ
ಕೋಲಾರ: ಗ್ಯಾಸ್ ಸೋರಿಕೆಯಿಂದ ಬೆಂಕಿ ಹರಡಿ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಸುಟ್ಟು ಹೋಗಿರುವ ಘಟನೆ ಕೋಲಾರದ ರಹಮತ್ ನಗರದಲ್ಲಿ ಶುಕ್ರವಾರ ನಡೆದಿದೆ. ಸೈಯದ್ ಲತೀಪ್ ಎಂಬುವರ ಮನೆಯಲ್ಲಿ ಅವರ ಪತ್ನಿ ಗ್ಯಾಸ್ ಸ್ಟೌವ್ ಮೇಲೆ ಹಾಲಿಟ್ಟು ಬೇರೆ ಕೆಲಸದಲ್ಲಿ ಮಗ್ನರಾಗಿದ್ದು, ಹಾಲು ಹುಕ್ಕಿ ಗ್ಯಾಸ್ ಮೇಲೆ ಬಿದ್ದು ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿದೆ. ಬೆಂಕಿಯ ಕಿಡಿಗಳಿಂದ ಮನೆಯಲ್ಲಿದ್ದ ಬಟ್ಟೆ, ಪಾತ್ರೆ ಹಾಗೂ ಇನ್ನಿತರ ಪದಾರ್ಥಗಳು ಸುಟ್ಟು ಹೋಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸುಮಾರು 1 ಲಕ್ಷ ರು.ನಷ್ಟವಾಗಿದೆ ಎಂದು ಮನೆಯ ಮಾಲೀಕ ದೂರಿನಲ್ಲಿ ತಿಳಿಸಿದ್ದಾರೆ.
ಪತಿ ಮೃತಪಟ್ಟ ಕ್ಷಣ ಪತ್ನಿ ಸಾವು
ಮಾಲೂರು: ತಾಲೂಕಿನ ಜಯಮಂಗಲದಲ್ಲಿ ಶುಕ್ರವಾರ ಹೃದಯಘಾತದಿಂದ ಕಣ್ಣು ಮುಂದೆ ಮೃತಪಟ್ಟ ಪತಿಯನ್ನು ಕಂಡ ಪತ್ನಿಯೂ ಹೃದಯಘಾತಕ್ಕೊಳಗಾಗಿ ಮೃತಪಟ್ಟಿದ್ದು, ಸಾವಿನಲ್ಲಿಯೂ ಈ ದಂಪತಿ ಒಂದಾಗಿದ್ದಾರೆ. ತಾಲೂಕು ಬಿಜೆಪಿ ಯುವ ಮೊರ್ಚಾದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಪ್ರಮುಖ್ ಶೇಷಗಿರಿಯ ತಂದೆ ಚೂಕ್ಕಪ್ಪ(74) ಹಾಗೂ ತಾಯಿ ರಾಜಮ್ಮ (68) ಮೃತಪಟ್ಟವರು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಚೂಕ್ಕಪ್ಪ ಹೃದಯಘಾತಕ್ಕೊಳಗಾಗಿ ಕುಸಿದು ಬಿದ್ದರು. ಒಳಗಿದ್ದ ರಾಜಮ್ಮ ಓಡಿ ಬಂದು ಪತಿಯ ಮೈಮೇಲೆ ಎರಗಿದವರು ಮೇಲೇಳಲೇ ಇಲ್ಲ. ಒಂದೈದು ನಿಮಿಷಗಳ ಅಂತರದಲ್ಲಿ ಇಬ್ಬರೂ ಇಹಲೋಕ ತ್ಯಜಿಸಿದ್ದರು. ದಂಪತಿ ಮೂವರು ಪುತ್ರರು ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ.
ಜೀವನದಲ್ಲಿ ಜುಗುಪ್ಸೆ: ವ್ಯಕ್ತಿ ಆತ್ಮಹತ್ಯೆ
ಕೆಜಿಎಫ್: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉರಿಗಾಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಟ್ಯಾಂಕ್ ಬ್ಲಾಕ್ ಬಡಾವಣೆಯ ಗಿರೀಶ್(20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಉರಿಗಾಂ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು
ಕೆಜಿಎಫ್: ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಜಕ್ಕಂಗೊಳಿಸಿ ಕಾರನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೌರಿಲಾಲ್ ಪೇಟೆ ನಿವಾಸಿ ಅಬೀಬ್ಖಾನ್ ಅವರಿಗೆ ಸೇರಿದ ಕ್ವಾಲೀಸ್ ಕಾರ್ ಸಂಖ್ಯೆ ಕೆಎ.23 ಪಿ-3663 ಜು. 16 ರಂದು ಅವರ ನಿವಾಸದ ಮುಂದೆ ನಿಲ್ಲಿಸಲಾಗಿತ್ತು. ಅಂದು ರಾತ್ರಿ ಯಾರೋ ದುಷ್ಕರ್ಮಿಗಳು ಕಾರಿನ ಗಾಜನ್ನು ಜಖಂಗೊಳಿಸಿ ಕಾರನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಅಬೀಬ್ಖಾನ್ ರಾಬರ್ಟ್ಸನ್ಪೇಟೆ ಠಾಣೆಗೆ ದೂರು ನೀಡಿದ್ದಾರೆ.