ಮಾಲೂರು ಸಾಹಿತ್ಯ ಸಮ್ಮೇಳನ ಇಂದು
ಮಾಲೂರು: ತಾಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿ ತಾಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಶನಿವಾರ ನಡೆಯಲಿದೆ.
ಸಮ್ಮೇಳನಕ್ಕಾಗಿ ಸಿದ್ಧಪಡಿಸಿರುವ ಡಿ.ಎನ್. ದೊಡ್ಡಿ ವೆಂಕಟಗಿರಿಯಪ್ಪ ವೇದಿಕೆಯಲ್ಲಿ ಶನಿವಾರ ಬೆಳಿಗ್ಗೆ ಸಮ್ಮೇಳನವನ್ನು ಹಿರಿಯ ಸಾಹಿತಿ ನಟರಾಜ್ ಬೂದಾಳ್ ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ತಹಸೀಲ್ದಾರ್ ಸಿ.ಎಲ್. ಶಿವಕುಮಾರ್ ಅವರು ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ನಂತರ ಪರಿಷತ್ತಿನ ಧ್ವಜವನ್ನು ಕಸಾಪ ತಾಲೂಕು ಅಧ್ಯಕ್ಷ ಮಾ.ಗೋ. ಮಧುಸೂಧನ್ ಆರೋಹಣ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷ ವೆಂಕಟಾಪು ಸತ್ಯಂ ಅವರನ್ನು ಜಾನಪದ ಕಲಾ ತಂಡದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಗುತ್ತದೆ.
ಕಲಾ ತಂಡಗಳಿಗೆ ರಾಜ್ಯ ಜಾನಪಕ ಅಕಾಡಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಚಾಲನೆ ನೀಡಲಿದ್ದಾರೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಶಾಸಕ ಮಂಜುನಾಥ್ಗೌಡ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ಅವರ ಆಶಯ ನುಡಿಗಳ ನಂತರ ಸಮ್ಮೇಳನಾಧ್ಯಕ್ಷ ವೆಂಕಟಾಪು ಸತ್ಯಂ ವಿರಚಿತ ನೇಸರು 'ನನ್ನ ದೇವರು' ಕೃತಿ ಬಿಡುಗಡೆಯಾಗಲಿದೆ. ಮುಖ್ಯ ಅಥಿತಿಗಳಾಗಿ ಎಂಎಲ್ಸಿ ವೈ.ಎ. ನಾರಾಯಣಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಮಾಸ್ತಿ ಕೃಷ್ಣಪ್ಪ, ಮಾಜಿ ಶಾಸಕ ಎ. ನಾಗರಾಜ್ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭ ನಂತರ ಜಿಲ್ಲೆಯ ಜೀವಂತ ಸಮಸ್ಯೆಗಳು ಮತ್ತು ನಾವು ವಿಚಾರ ಗೋಷ್ಠಿಯು ಡಾ. ಚಂದ್ರಶೇಖರ್ ನಂಗಲಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಡಾ.ತ್ಯಾವನಹಳ್ಳಿ ಗೋಪಾಲಗೌಡ ಹಾಗೂ ಸುಗ್ಗಂಡಹಳ್ಳಿ ಮುನಿರಾಜು ಭಾಗವಹಿಸಲಿದ್ದಾರೆ. ಕವಿ ಲಕ್ಷ್ಮಿಪತಿ ಕೋಲಾರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಭಾಗವಹಿಸಲಿದ್ದಾರೆ. ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರ ವೆಂಕಟಾಪು ಸತ್ಯಂ ರವರ ಭಾಷಣ ಮಾಡಲಿದ್ದಾರೆ.
ವಿದ್ಯಾರ್ಥಿಗಳಿಗೆ ಅಭಿನಂದನೆ: ಇದೇ ಸಂದರ್ಭದಲ್ಲಿ 2014 ನೇ ಸಾಲಿನಲ್ಲಿ ಹತ್ತನೇ ಮತ್ತು ಪಿಯುಸಿ ಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಚೆನ್ನಕೇಶವ, ಆರ್. ಪ್ರಭಾಕರ್, ಜಿ.ಇ. ರಾಮೇಗೌಡ ಭಾಗವಹಿಸಲಿದ್ದಾರೆ.
ದಲಿತ ಸಂಘಟನೆಗಳ ಖಂಡನೆ: ತಾಲೂಕು ಆಡಳಿತ ನಡೆಸುತ್ತಿರುವ ನಾಡ ಹಬ್ಬ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ದಲಿತ ಸಂಘಟನೆಗಳನ್ನು ಕಡೆಗಣಿಸಿರುವುದು ಖಂಡನೀಯ ಎಂದು ದಲಿತ ಸಿಂಹ ಸೇನೆಯ ಜಿಲ್ಲಾಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ ಹೇಳಿದರು. ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ದಲಿತ ಸಂಘಟನೆಯ ಹೆಸರನ್ನು ಮುದ್ರಿಸದೆ ದಲಿತ ಸಂಘಟನೆಗಳನ್ನು ಕಡೆಗಣಿಸಿರುವುದು ಸರಿ ಅಲ್ಲ. ಹೋರಾಟ ಸಂಘಟನೆಗಳಾದ ದಲಿತ ಸಂಘಟನೆಗಳಿಗೂ ಕನ್ನಡ ಸಾಹಿತ್ಯ ಪರಿಷತ್ಗೂ ಹೆಚ್ಚಿನ ಸಂಬಂಧವಿರುವುದರಿಂದ ಸಮ್ಮೇಳನವು ರಾಜಕೀಯ ಪ್ರೇರಿತವಾಗದೆ ನಡೆಯಲಿ ಎಂದರು.
ಇನ್ನೂ ಮುಂದೆಯದರೂ ದಲಿತ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಕೊಂಡು ಕಾರ್ಯಕ್ರಮ ನಿರೂಪಿಸಬೇಕೆಂದು ಶ್ರೀನಿವಾಸ್ ರವರು ಒತ್ತಾಯಿಸಿದರು. ದಸಂಸ ದ ಹೆಚ್. ನಾರಾಯಣಪ್ಪ, ಮಾಸ್ತಿ ಬಾಬು, ದಸಂಸದ ಎ.ಕೆ. ವೆಂಕಟೇಶ್ ಇದ್ದರು.
ಸತ್ಯಂಗೆ ಚಿಕ್ಕತಿರುಪತಿ ಭಾವನಾತ್ಮಕ ಸಂಬಂಧ
ವೆಂಕಟಾಪು ಸತ್ಯಂ ಅಲಂಬಾಡಿದಲ್ಲಿ ಹುಟ್ಟಿದವರು. ತಂದೆ ಗೋಪಾಲಪ್ಪ, ತಾಯಿ ಚಿಕ್ಕಮ್ಮಯ್ಯ ಅವರ ಏಕ ಮಾತ್ರ ಪುತ್ರರು. ತಮ್ಮ ಬಾಲ್ಯದ ಶಿಕ್ಷಣವನ್ನು ಚಿಕ್ಕತಿರುಪತಿಯ ಆಶ್ರಮ(ವಸತಿ) ಶಾಲೆಯಲ್ಲಿ ಪಡೆದರು. ಈಗ ಅದೇ ಚಿಕ್ಕತಿರುಪತಿಯಲ್ಲಿ ನಡೆಯುತ್ತಿರುವ ಸಮ್ಮೇಳನ ಅಧ್ಯಕ್ಷರಾಗುತ್ತಿರುವುದು ಅವರಿಗೆ ಭಾವನಾತ್ಮಕವಾಗಿ ಹರ್ಷವುಂಟು ಮಾಡಿದೆ. ಕಾಲೇಜು ದಿನಗಳಲ್ಲಿ ದಲಿತ ಚಳವಳಿಗೆ ಹೇಗೆ ಗಂಗಾರಾಂ ಚಂಡಾಳ್ರಿಂದ ಪ್ರೇರಿತರಾದರೋ ಹಾಗೆ ಸಾಹಿತ್ಯ ಕಡೆ ವಾಲಲು ಕುವೆಂಪು ಅವರ ಸಾಹಿತ್ಯ ಉತ್ತೇಜಿಸಿತ್ತು. ಕಾಲೇಜು ಕಾಲದಲ್ಲಿ 'ಮಾರ್ವಾಡಿ ಮಗಳು' ಕವನ ಸಂಕಲನ ರಚಿಸಿದ ವೆಂಕಟಾಪು ಸತ್ಯಂ, 'ಸುಟ್ಟಾಗ ಸೂರ್ಯ ಸಾಕ್ಷಿ, ಬೆಂದಾಗ ಭೂಮಿ ಸಾಕ್ಷಿ', ದಲಿತ ಸಂಬಂಧ 'ದಸಂಸ ನೆನಪುಗಳು' ಕೃತಿಗಳನ್ನು ರಚಿಸಿದರು. 2009ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೆ. ಶಿವಾರೆಡ್ಡಿ ಅವರ ಅಂತರ್ಜನ್ಮ ಅನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. 2013ರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ 'ನಾಳೆ ನೆಮ್ಮದಿ ನಡಿಗೆ' ಚಿಕಿತ್ಸೆ ಮಾಹಿತಿವುಳ್ಳ ಪುಸ್ತಕ ಬರೆದಿದ್ದಾರೆ. ಅವರ ಇತ್ತೀಚಿನ ಕಾವ್ಯ-ಕವನ ಸಂಕಲನ ನೆಸರು 'ನನ್ನ ದೇವರು'. ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ. ಬೆಂಗಳೂರಿನ ವಿಜಯ ಟೀಚರ್ಸ್ ಟ್ರೇನಿಂಗ್ ಕಾಲೇಜಿನಲ್ಲಿ ಬಿಎಡ್ ಮುಗಿಸಿರುವ ವೆಂಕಟಾಪು ಸತ್ಯಂ ಹಾಲಿ ಮಾಲೂರಿನಲ್ಲಿರುವ ನೇತಾಜಿ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ 25 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.