ಎತ್ತಿನಹೊಳೆ ಯೋಜನೆ ಫಲ ಸಿಕ್ಕೇಸಿಗುತ್ತೆ
ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗುವುದರ ಬಗ್ಗೆ ನನಗೆ ನಂಬಿಕೆ ಬಂದಿದೆ. ಇನ್ನೂ ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಜನರಲ್ಲಿನ ಗೊಂದಲಗಳು, ಅನುಮಾನಗಳನ್ನು ಬಗೆಹರಿಸಲಿದೆ. ಒಟ್ಟಾರೆ ನಾಲ್ಕೈದು ವರ್ಷಗಳಲ್ಲಿ ಈ ಯೋಜನೆಯಲ್ಲಿ ಖಂಡಿತ ನೀರು ಸಿಗುತ್ತದೆ ಎಂದು ಸಂಸದ ಕೆ.ಎಚ್ . ಮುನಿಯಪ್ಪ ಭರವಸೆ ನೀಡಿದರು.
ನಗರದ ಶ್ರೀದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಜಲಮೂಲಗಳ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಸುಮ್ಮನಾಗಿಲ್ಲ. ಮೊದಲು ಯೋಜನೆಗೆ ಶಿಲಾನ್ಯಾಸ ಸಂದರ್ಭದಲ್ಲಿ ಈ ಭಾಗಕ್ಕೆ ಎತ್ತಿನಹೊಳೆ ಯೋಜನೆಯಿಂದ ನೀರು ಬರುತ್ತದೆಯೇ ಎಂಬ ನಂಬಿಕೆ ಇರಲಿಲ್ಲ.
ಕೇಂದ್ರ ಹಾಗೂ ರಾಜ್ಯ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆಗೆ ಯೋಜನೆ ಬಗ್ಗೆ ಚರ್ಚೆ ನಡೆಸಿದ ನಂತರ ನನ್ನಲ್ಲಿನ ಅನುಮಾನ ಹೋಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನಡೆ ಸರಿಯಾಗಿಯೇ ಇದೆ.
ಕೋಲಾರ ಜಿಲ್ಲೆಯ ಮುಳಬಾಗಿಲಿನ ನಂಗಲಿಯವರೆಗೂ ನೀರು ಬರುತ್ತದೆ ಎಂದರು.
ಶಾಸಕ ಕೆ. ಸುಧಾಕರ್ ಮಾತನಾಡಿ, ಕುಡಿಯುವ ನೀರಿನ ಗಂಭೀರ ಸಮಸ್ಯೆ ಹೊಂದಿರುವ ಚಿಕ್ಕದೇಶ ಸಿಂಗಾಪುರ್ನಲ್ಲಿ ಡಿ ಸ್ಯಾಲಿನೇಷನ್ ಮೂಲಕ ಸಮುದ್ರ ತೀರದ ನೀರನ್ನು ಬಳಸಿಕೊಂಡು ಕೊರತೆಯನ್ನು ನೀಗಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಎಲ್ಲಾ ಸಂಪನ್ಮೂಲಗಳಿದ್ದರೂ ನೀರಿಗೆ ಪರದಾಡುವಂತಹುದು ತಪ್ಪುತ್ತಿಲ್ಲ ಎಂದರು.
ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಪ್ರತಿದಿನ 300 ಲಾರಿ ಲೋಡ್ ಮರಳು ಅಕ್ರಮವಾಗಿ ಬೆಂಗಳೂರಿಗೆ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ಶಾಸಕ ರಾಜಣ್ಣ, ಜಿ.ಪಂ. ಸದಸ್ಯ ಸತೀಶ್ , ಕರ್ನಾಟಕ ಮಾದ್ಯಮ ಅಕಾಡಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಕಾರ್ಯದರ್ಶಿ ಶಂಕರಪ್ಪ, ತಾ.ಪಂ. ಅಧ್ಯಕ್ಷ ಪಿ.ಎ. ಮೋಹನ್, ನಗರಸಭೆ ಅಧ್ಯಕ್ಷ ಲೀಲಾವತಿ ಶ್ರೀನಿವಾಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಜಯರಾಮ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ.ಕೆ.ಎನ್. ಕವನ ಮುಂತಾದವರು ಉಪಸ್ಥಿತರಿದ್ದರು.