ಕಣ್ಮನ ಸೆಳೆದ ಮಹಿಳೆಯರ ಕುಣಿತ
ತಾಲೂಕಿನ ಚಿಕ್ಕತಿರುಪತಿಯಲ್ಲಿ ಆಯೋಜಿಸಲಾಗಿದ್ದ 3 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಶನಿವಾರ ಅದ್ಧೂರಿಯಾಗಿ ನಡೆಯಿತು. ಬೆಳಿಗ್ಗೆ 7 ಗಂಟೆಗೆ ತಹಸೀಲ್ದಾರ್ ಶಿವುಕುಮಾರ್ ರಾಷ್ಟ್ರಧ್ವಜರೋಹಣ ನೇರವೇರಿಸಿದ ನಂತರ ಪರಿಷತ್ತಿನ ಧ್ವಜವನ್ನು ಕಸಾಪ ತಾಲೂಕು ಅಧ್ಯಕ್ಷ ಮಾ.ಗೋ.ಮಧುಸೂಧನ್ ಅರೋಹಣ ಮಾಡಿದರು. ನಂತರ ಸಮ್ಮೇಳನಾಧ್ಯಕ್ಷರನ್ನು ಸಮ್ಮೇಳನ ನಡೆಯಲಿದ್ದ ಸಂತ ಜೀವಿ ಡಿ.ಎನ್. ದೊಡ್ಡಿ ವೆಂಕಟಗಿರಿಯಪ್ಪ ವೇದಿಕೆಗೆ ಕಲಾ ತಂಡಗಳ ನೃತ್ಯದೊಂದಿಗೆ ಕರೆ ತರಲಾಯಿತು. ಜನಪದ ಕಲಾ ತಂಡಗಳಿಗೆ ರಾಜ್ಯ ಜಾನಪದ ಕಲಾ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಚಾಲನೆ ನೀಡಿದರು. ನಂದಿ ಧ್ವಜ ಕುಣಿತ,ವೀರಗಾಸೆ ಸೇರಿದಂತೆ ಹಲವು ಜನಪದ ಪ್ರಕಾರಗಳ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮಹಿಳೆಯರ ತಮಟೆ ಕುಣಿತ ನೋಡಿಗರನ್ನು ಸೆಳೆಯಿತು. ಸಮ್ಮೇಳನಾಧ್ಯಕ್ಷರು ಕುಳಿತ್ತಿದ್ದ ಪಲ್ಲಕ್ಕಿ ಮೆರವಣಿಗೆ ಶಾಸಕ ಮಂಜುನಾಥ್ ಗೌಡ ಚಾಲನೆ ನೀಡಿದರು. ಚಿಕ್ಕತಿರುಪತಿ ದೇವಾಲಯ ಸುತ್ತ ಸುತ್ತಿದ ಮೆರವಣಿಗೆ ವೇದಿಕೆ ಬಳಿ ಬಂದಾಗ ಶಾಸಕ ಮಂಜುನಾಥ್ ಗೌಡ ಹಾಗೂ ಕಸಾಪ ಪದಾಧಿಕಾರಿಗಳು ಅತ್ಮೀಯವಾಗಿ ಬರಮಾಡಿಕೊಂಡರು. ಸಮ್ಮೇಳನದ ಅಂಗವಾಗಿ ಅವರಣದಲ್ಲಿ ತೆರಯಲಾಗಿದ್ದ ಪುಸ್ತಕ ಮಳಿಗೆಗಳಲ್ಲಿ ಸಾಹಿತ್ಯಾಶಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಮ್ಮೇಳನಕ್ಕೆ ಬಂದ ಮೂರು ಸಾವಿರಕ್ಕೂ ಹೆಚ್ಚು ಸಾಹಿತ್ಯಾಸಕ್ತರಿಗಾಗಿ ಕಸಾಪದವರು ಅಚ್ಚುಕಟ್ಟಾದ ಉಟದ ವ್ಯವಸ್ಥೆ ಮಾಡಿದ್ದರು.
ಏನು ಕೊಟ್ಟಿದ್ದೇವೆ?
ಶಾಸಕ ಮಂಜುನಾಥ್ ಗೌಡ ಮಾತನಾಡಿ, ಇಂದಿನ ಇಂಟರ್ ನೆಟ್ ಕಾಲದಲ್ಲೂ ಬರವಣಿಗೆ ಉಳಿಸಿಕೊಂಡು ಸಾಹಿತ್ಯ ಲೋಕವನ್ನು ಕಾಪಾಡುತ್ತಿರುವ ಇಂದಿನ ಸಾಹಿತಿಗಳಿಗೆ ಜನಪ್ರತಿನಿಧಿಗಳಾಗಿ ಎನು ಮಾಡಿದ್ದೇವೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿ, ತಾಲೂಕು ಸಮ್ಮೇಳನಗಳಲ್ಲಿ ಅತಿ ಹೆಚ್ಚು ದಲಿತ ಸಾಹಿತಿಗಳನ್ನೇ ಅಧ್ಯಕ್ಷರಾಗಿ ಆರಿಸಿರುವುದು ನಮ್ಮ ಹೆಗ್ಗಳಿಕೆ ಎಂದರು.
ಕನ್ನಡ ಭಾಷೆ ಈಗ ಉಳ್ಳವರ ಭಾಷೆಯಾಗಿ ಉಳಿದಿಲ್ಲ
ಕನ್ನಡ ಭಾಷೆ ಈಗ ಉಳ್ಳವರ ಭಾಷೆಯಾಗಿ ಉಳಿದಿಲ್ಲ. ಅವು ಎನ್ನಿದ್ದರೂ ಕೆಳಸ್ತರದಲ್ಲಿ ಇರುವ ಬಡವರು, ದಲಿತರಲ್ಲಿ ಮಾತ್ರ ಉಳಿದಿದೆ ಎಂದು ಹಿರಿಯ ಸಾಹಿತಿ ನಟರಾಜ್ ಬೂದಾಳ್ ಹೇಳಿದರು. ಅವರು ತಾಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿ ನಡೆಯುತ್ತಿರುವ 3 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಖಾಸಗಿಕರಣ, ಜಾಗತಿಕರಣ ನಡುವೆ ಕನ್ನಡ ಎಂಬುದು ಬಡತನದ ಸಂಕೇತವಾಗಿ ಪಾಳು ಬೀಳುತ್ತಿರುವ ಕನ್ನಡ ಶಾಲೆಯಂತಾಗಿ ನಿಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು.