ಕರ್ತವ್ಯ ಮರೆತರೆ ನಿರ್ದಾಕ್ಷಿಣ್ಯ ಕ್ರಮ
ಕೋಲಾರ,: ಡಿಸಿಸಿ ಬ್ಯಾಂಕಿನ ಮೂಲಕ ರೈತರಿಗೆ ಉತ್ತಮ ಸೇವೆ ನೀಡಲು ಆಡಳಿತ ಮಂಡಳಿ ಉದ್ದೇಶಿಸಿ ಈಗಾಗಲೇ ಕೆಲವು ರಚನಾತ್ಮಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು, ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ಮರೆತರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಎಚ್ಚರಿಕೆ ನೀಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶನಿವಾರ ಸಂಜೆ ಡಿಸಿಸಿ ಬ್ಯಾಂಕಿನ ಮುಂದಿನ ಸವಾಲುಗಗಳು ಹಾಗೂ ದಾರಿ ಕುರಿತ ಕಾರ್ಯಾಗಾರಕ್ಕೆ ಚಾಲನೆ ಹಾಗೂ ಬ್ಯಾಂಕ್ನ ನಿರ್ಗಮಿತ ಎಂಡಿ ವೆಂಕಟೇಶಪ್ಪರನ್ನು ಬೀಳ್ಕೊಟ್ಟು ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ಬ್ಯಾಂಕ್ನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೆ ತರುವುದೇ ನೂತನ ಆಡಳಿತ ಮಂಡಳಿಯ ಪ್ರಮುಖ ಗುರಿಯಾಗಿದೆ ಎಂದರು.
ನೌಕರರು ಸಮಯಪ್ರಜ್ಞೆ, ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ಬ್ಯಾಂಕಿನ ಹಿತದೃಷ್ಟಿಯಿಂದ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯವಾಗುತ್ತದೆ ಎಂದ ಅವರು, ನೂತನ ಆಡಳಿತ ಮಂಡಳಿ ಬಂದ ನಂತರ ಕೈತುಂಬ ಸಂಬಳ, ಮೊಬೈಲ್, ಸಮವಸ್ತ್ರ ನೀಡಲಾಗಿದೆ. ಇಷ್ಟಾದರೂ ಕೆಲವು ಸಿಬ್ಬಂದಿ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಿಲ್ಲ. ಬ್ಯಾಂಕಿನ ಪ್ರಗತಿ ಕಡೆಗಣಿಸುವವರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ, ಯಾರೇ ತಪ್ಪು ಮಾಡಿದರೂ ಮನೆಗೆ ಕಳುಹಿಸುವುದು ಖಂಡಿತ ಎಂದು ತಿಳಿಸಿದರು.
ನಿರ್ಗಮಿತ ಎಂಡಿ ವೆಂಕಟೇಶಪ್ಪ ಅವರು ಮೃಧು ಹೃದಯಿಗಳು, ಅವರ ಉತ್ತಮ ಗುಣ ಇಲ್ಲಿ ಕೆಲಸ ಮಾಡುತ್ತಿಲ್ಲ ಆದ್ದರಿಂದಲೇ ನಿಷ್ಠುರ ನಡೆಯ ದಕ್ಷ ಅಧಿಕಾರಿ ಉಮಾಕಾಂತ್ರನ್ನು ಎಂಡಿಯಾಗಿ ಹಾಕಿಸಿಕೊಂಡು ಬಂದಿರುವುದಾಗಿ ನುಡಿದರು.
ಆನ್ಲೈನ್ ವ್ಯವಸ್ಥೆ ಜಾರಿಯಾಗಿದೆ, ಆಧುನಿಕತೆಯನ್ನು ಸದುಪಯೋಗ ಪಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಾಗಿದೆ. ನೌಕರರು ಕಂಪ್ಯೂಟರ್ ಕಲಿತು ಜಾಗತಿಕ ವ್ಯವಸ್ಥೆಗೆ ತಕ್ಕಂತೆ ಬದಲಾಗಬೇಕೆಂದರು. ಕಳೆದ 150 ದಿನಗಳಲ್ಲಿ 25 ಕೋಟಿ ಸಾಲ ನೀಡಿದ್ದೇವೆ, 6 ಕೋಟಿ ಹಳೆ ಸಾಲ ವಸೂಲಿ ಮಾಡಿದ್ದೇವೆ, ನಮ್ಮ ಬಗ್ಗೆ ಮಾತೋಡೋರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಿಷ್ಟೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು. ಸಿಬ್ಬಂದು ಕೊರತೆಯ ನೆಪ ಬೇಡ, ಇದನ್ನು ಸಹಿಸೊಲ್ಲ, ಇಚ್ಛಾಶಕ್ತಿಯಿಂದ ಕೆಲಸ ಮಾಡಿ, ರಾಜ್ಯದಲ್ಲೇ ತನ್ನ ನೌಕರರಿಗೆ ಮೊಬೈಲ್ ವ್ಯವಸ್ಥೆ ನೀಡಿರುವ 2ನೇ ಬ್ಯಾಂಕ್ ಕೋಲಾರ ಡಿಸಿಸಿ ಬ್ಯಾಂಕ್ ಎಂದು ನೂತನ ಎಂಡಿ ರಮಾಕಾಂತೆ ಹೇಳಿದರು.ಬೀಳ್ಕೊಡುಗೆ ಸ್ವೀಕರಿಸಿದ ನಿರ್ಗಮಿತ ಎಂಡಿ ಡಾ. ವೆಂಕಟೇಶಪ್ಪ, ಹಿಂದೆ ಬ್ಯಾಂಕ್ ಬರಿ ನ್ಯಾಯಾಲಯ, ಕೇಸ್ ಗಳಿಗೆ ಸೀಮಿತವಾಗಿತ್ತು. ನೂತನ ಆಡಳಿತ ಮಂಡಳಿಯ ಪರಿಶ್ರಮದಿಂದ ಈಗ ಹಾಲು ಒಕ್ಕೂಟದ ವಹಿವಾಟು ಇಲ್ಲೇ ಆರಂಭವಾಗಿದೆ, 2.37 ಕೋಟಿ ರು. ನಿವ್ವಳ ಲಾಭ ಗಳಿಸಿದೆ ಎಂದರು.
ಸಹಕಾರಿ ಯೂನಿಯನ್ ಅಧ್ಯಕ್ಷ ಕೃಷ್ಣಾರೆಡ್ಡಿ, ಯೂನಿಯನ್ ನಿರ್ದೇಶಕ ಉರಿಗಿಲಿ ರುದ್ರಸ್ವಾಮಿ, ಸಹಕಾರ ಸಂಘಗಳ ಸಹಾಯಕ ಪ್ರಬಂಧಕ ಮುನಿರಾಜು, ಬ್ಯಾಂಕಿನ ಬೈರೇಗೌಡ, ಅರುಣ್ಕುಮಾರ್ ಇದ್ದರು.