ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕ್ಲೀನ್ ಸಿಟಿ ಸ್ಥಾಪನೆಗೆ ನೌಕರರು ಸಹಕಾರ ನೀಡಿ

Mainashree
Updated On : 27 Jul 2014, 12:44 pm

ಕೋಲಾರ: ನಗರವನ್ನು ಸ್ವಚ್ಛವಾಗಿಡಲು ನಗರಸಭೆ ಹಮ್ಮಿಕೊಂಡಿರುವ ಕ್ಲೀನ್ ಸಿಟಿ ಯೋಜನೆಗೆ ಜಿಲ್ಲಾ ಸರ್ಕಾರಿ ನೌಕರರು ಸಹಕಾರ ನೀಡಬೇಕೆಂದು ನಗರಸಭೆ ಅಧ್ಯಕ್ಷ ಮುಬಾರಕ್ ಮನವಿ ಮಾಡಿದರು.
ನಗರಸಭೆ ಸಭಾಂಗಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದೆ, ನಗರದ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಸರ್ಕಾರಿ ನೌಕರರ ಸಂಘ ಸೇರಿದಂತೆ ನಗರದ ಇನ್ನಿತರ ಸಂಘ ಸಂಸ್ಥೆಗಳು ಕೈಜೋಡಿಸಿದಲ್ಲಿ ಕ್ಲೀನ್ ಸಿಟಿಯ ಉದ್ದೇಶ ಈಡೇರುತ್ತದೆ ಎಂದರು.
ಸರ್ಕಾರಿ ನೌಕರರು ಶ್ರಮದಾನದಲ್ಲಿ ಪಾಲ್ಗೊಂಡು ಜನತೆಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು, ತಮ್ಮ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಕಸ ವಿಲೇವಾರಿಯ ಪ್ರಾಮುಖ್ಯತೆ ಮತ್ತು ಜವಾಬ್ದಾರಿಯ ಕುರಿತು ಸಲಹೆ ಸೂಚನೆ ನೀಡುವ ಮೂಲಕ ಕೋಲಾರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಮನವಿ ಮಾಡಿದರು.
ನಗರಸಭೆ ಮೊದಲ ಹಂತವಾಗಿ ಹಮ್ಮಿಕೊಂಡಿರುವ ಸ್ವಚ್ಛತಾ ಆಂದೋಲನದ ಯಶಸ್ಸಿಗೆ ಸರ್ಕಾರಿ ನೌಕರರು, ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ, ಅಂತಹ ಸಹಕಾರ ಮತ್ತು ಪ್ರೋತ್ಸಾಹ ಸಿಕ್ಕಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ಯೋಜನೆಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎ. ಮಂಜುನಾಥ್ ಮಾತನಾಡಿ, ನಗರಸಭೆ ಅನುಷ್ಠಾನಕ್ಕೆ ತಂದಿರುವ ಸ್ವಚ್ಚತಾ ಆಂದೋಲನದಿಂದ ನಗರದಲ್ಲಿ ಕಸದ ರಾಶಿಗಳು ಕ್ರಮೇಣ ಕರಗುತ್ತಿದೆ ಎಂದು ತಿಳಿಸಿ ಪ್ರಶಂಶಿಸಿದರು. ನಗರಸಭೆ ನಗರದಲ್ಲಿ ಸ್ವಚ್ಛತೆಗಾಗಿ ಶ್ರಮದಾನ ಕೈಗೊಂಡರೆ ನೌಕರರ ಸಂಘದ ಎಲ್ಲಾ ಪ್ರತಿನಿಧಿಗಳು ಇಡೀ ದಿನ ಶ್ರಮದಾನದಲ್ಲಿ ಪಾಲ್ಗೊಂಡು ಪ್ರಮುಖವಾಗಿ ನಗರದ ಅಂದಗೆಡಿಸಿರುವ ಗೋಡೆ ಬರಹ ಅಳಿಸುವುದು, ರಸ್ತೆ ಬದಿ ಕಸ, ಕಡ್ಡಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕೈಜೋಡಿಸುವುದಾಗಿ ತಿಳಿಸಿದರು.
ಕ್ಲೀನ್ ಸಿಟಿ ಯೋಜನೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಕಸ ವಿಲೇವಾರಿಗಾಗಿ ಸಂಕಷ್ಟ ಅನುಭವಿಸುತ್ತಿದ್ದ ನಗರಸಭೆ ಇದೀಗ ನಿಟ್ಟುಸಿರು ಬಿಡುವಂತಾಗಿದೆ, ಈ ನಿಟ್ಟಿನಲ್ಲಿ ಕಸ ವಿಂಗಡಣೆಯಲ್ಲಿ ಸಹಕರಿಸುವಂತೆ ನೌಕರರು ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಸೂಚಿಸುವುದಾಗಿ ತಿಳಿಸಿದರು.
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ಮತ್ತಿತರರು ನಗರಸಭೆಗೆ ಕಸ ಸಂಗ್ರಹಣೆಗೆ ಡಸ್ಟ್‌ಬಿನ್‌ಗಳನ್ನು ಕೊಡುಗೆಯಾಗಿ ನೀಡುವುದಾಗಿ ಪ್ರಕಟಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸಾಕಮ್ಮ, ಸದಸ್ಯರಾದ ಮುರಳಿಗೌಡ, ವ್ಯವಸ್ಥಾಪಕ ಶಿವಕುಮಾರ್, ನೌಕರರ ಸಂಘದ ಗೌರವಾಧ್ಯಕ್ಷ ರವಿಚಂದ್ರ, ಜಿಲ್ಲಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಪಲ್ಲವಿಮಣಿ, ಖಜಾಂಚಿ ರಂಗಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟಶಿವಪ್ಪ, ಉಪಾಧ್ಯಕ್ಷರಾದ ಜಯರಾಂ, ಆರ್. ನಾಗರಾಜ್, ಎಂ. ನಾಗರಾಜ್, ಪತ್ರಿಕಾ ಕಾರ್ಯದರ್ಶಿ ಸಿ.ಎಲ್. ಶ್ರೀನಿವಾಸಲು, ಶಿಕ್ಷಕರ ಪ್ರತಿನಿಧಿಗಳಾದ ಮುರಳಿಮೋಹನ್, ಚೌಡಪ್ಪ, ಬಂಗಾರಪೇಟೆ ತಾಲೂಕು ಅಧ್ಯಕ್ಷ ನಾಗಾನಂದ್ ಕೆಂಪರಾಜ್, ರತ್ನಪ್ಪ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement