ರೈತರಿಗೆ ಸವಲತ್ತು ಕಲ್ಪಿಸದಿದ್ದರೆ ಕ್ರಮ
ಚಿಂತಾಮಣಿ: ರೈತರಿಗೆ ನೀಡುವ ರಸಗೊಬ್ಬರ ಸಮರ್ಪಕವಾಗಿ ರಿಯಾಯಿತಿ ದರದಲ್ಲಿ ವಿತರಿಸಲು ಕೃಷಿ ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜಾಗೃತಿ ಸಭೆಯಲ್ಲಿ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆ ಅಭಾವದಿಂದ ಬಿತ್ತನೆ ಕಾರ್ಯ ಶೇ.15ರಷ್ಟು ನಡೆದಿದೆ. ಆದರೆ ಗ್ರಾಮೀಣ ಪ್ರದೇಶದ ರೈತರಿಗೆ ಮಳೆ ಬಿದ್ದ ತಕ್ಷಣ ಅಗತ್ಯವಾದ ರಸಗೊಬ್ಬರ ಪೂರೈಸಲು ಅಧಿಕಾರಿಗಳು ಗೊಬ್ಬರ ಶೇಖರಣೆ ಮಾಡಿಟ್ಟುಕೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 420 ಗ್ರಾಮಗಳಿದ್ದು 96 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಪಂ ಅಧಿಕಾರಿಗಳ ಬೇಜವಾಬ್ದಾರಿಯಿಂದ 42 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡುವ ದುಸ್ಥಿತಿ ಬಂದಿದೆ ಎಂದರು. ಇದಕ್ಕೆ ದನಿಗೂಡಿಸಿದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ನನ್ನ ಮಾತಿಗೆ ಬೆಲೆ ಕೊಡದೆ ಇರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಅಧಿಕಾರಿಗಳು ಬಲಾಢ್ಯರ ಮಾತುಗಳನ್ನು ಕೇಳಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಡಾ.ವಿಶಾಲ್ ಮಾತನಾಡಿ, ವಿವಿಧ ಇಲಾಖೆಯ ಅಧಿಕಾರಿಗಳು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳ ಕೈ ತಲುಪುವ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ.ದಿವ್ಯಾಗೋಪಿನಾಥ್, ಜಿಪಂ ಅಧ್ಯಕ್ಷ ಕೇಶವರೆಡ್ಡಿ, ತಾಲೂಕು ದಂಡಾಧಿಕಾರಿ ಜಿ.ವಿ.ಹನುಮಂತರೆಡ್ಡಿ, ಡಿವೈಎಸ್ಪಿ ಸಣ್ಣತಿಮ್ಮಪ್ಪ, ತಾಪಂ ಕಾರ್ಯನಿರ್ವಣಾಧಿಕಾರಿ ವಸಂತ್‌ಕುಮಾರ್, ನಗರಸಭಾ ಅಧ್ಯಕ್ಷ ಜಿಯಾವುಲ್ಲಾ ರೆಹಮಾನ್, ಉಪಾಧ್ಯಕ್ಷೆ ತುಳಸಿ ರವಿ ಹಾಗೂ ಅಧಿಕಾರಿಗಳು ಇದ್ದರು.