ಬ್ರಹ್ಮಜ್ಞಾನ ಅರಿವವಿಲ್ಲದ್ದರಿಂದ ಸನಾತನ ಧರ್ಮದ ಅವಹೇಳನ
ಕೋಲಾರ: ಬ್ರಹ್ಮಜ್ಞಾನದ ಅರಿವಿಲ್ಲದೆ ಅನೇಕರು ಸನಾತನ ಧರ್ಮ ಹಾಗೂ ಆಧ್ಯಾತ್ಮಿಕತೆಯ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆಂದು ಮೈಸೂರಿನ ಪತಂಜಲಿ ಧ್ಯಾನ ಕೇಂದ್ರ ವೇದ ವಿದ್ವಾಂಸರು ಹಾಗೂ ಹಿರಿಯ ಥಿಯಾಸಫಿಸ್ಟ್ ನಾಗರಾಜ ಸೂರ್ಯನಾರಾಯಣ ಪಂಡೆ ವಿಷಾದ ವ್ಯಕ್ತಪಡಿಸಿದರು. ನಗರದ ಧರ್ಮರಾಯ ನಗರ ಬಡಾವಣೆಯಲ್ಲಿನ ಥಿಯಸಾಫಿಕಲ್ ಸೊಟಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 110ನೇ ಸ್ಥಾಪನಾ ದಿನಾಚರಣೆಯಲ್ಲಿ ಸನಾತನ ಧರ್ಮದ ಪ್ರಕಾಶದಲ್ಲಿ ಬ್ರಹ್ಮಜ್ಞಾನ ಬಗ್ಗೆ ಉಪನ್ಯಾಸ ನೀಡಿದ ಅವರು, ಬ್ರಹ್ಮಜ್ಞಾನದ ಕುರಿತು ಸವಿಸ್ತಾರವಾಗಿ ಅರಿತುಕೊಳ್ಳಬೇಕಾದರೆ ಸಂಸ್ಕೃತವನ್ನು ಕನಿಷ್ಟ ಮಟ್ಟಿಗಾದರೂ ತಿಳಿದಿರಬೇಕು ಎಂದರು. ಕೆಲವು ಸ್ವಯಂ ಘೋಷಿತ ಪ್ರಗತಿಪರರು ರಾಜಕೀಯದಲ್ಲಿ ಧರ್ಮ ಬೇಡವೆಂದು ವಾದ ಮಾಡುತ್ತಾರೆ. ರಾಜಕೀಯದಲ್ಲಿ ಧರ್ಮ ಬೇಡವೆಂದರೆ ಅಸತ್ಯವನ್ನು ಪ್ರತಿಪಾದಿಸಿದಂತಾಗುತ್ತದೆ. ಹಾಗದರೆ ರಾಜಕೀಯ ಅಸತ್ಯವೇ ಎಂದು ಪ್ರಶ್ನಿಸಿದರು. ಅಧ್ಯಕ್ಷತೆ ಥಿಯಸಾಫಿಕಲ್ ಸೊಸೈಟಿಯ ಅಧ್ಯಕ್ಷ ಬಿ.ಎಂ.ಬಸಪ್ಪ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಗಂಗೋಲಿ ಮತ್ತು ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಜನಸೇವೆ ಮಾಡುವ ಸಂಘಗಳು ಬಡವರಿಗೆ ಸಹಾಯ ಮಾಡಲಿ
ಕೆಜಿಎಫ್: ಜನ ಸೇವೆ ಮಾಡುವ ಸ್ವಯಂ ಸೇವಾ ಸಂಘಗಳು ಗ್ರಾಮೀಣ ಪ್ರದೇಶದ ಅರ್ಹ ಬಡವರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಗ್ರಾಮೀಣ ಪ್ರೌಢಶಾಲೆ ಅಧ್ಯಕ್ಷ ಆರೀಫ್‌ಖಾನ್ ಹೇಳಿದರು. ರೋಟರಿ ಕ್ಲಬ್ ಮತ್ತು ವಿಶ್ವಮಾನವ ಟ್ರಸ್ಟ್ ಆಶ್ರಯದಲ್ಲಿ ಬೇತಮಂಗಲ ಗ್ರಾಮೀಣ ಪೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಪುಸ್ತಕಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಪಂ ಸದಸ್ಯ ಅ.ಮು. ಲಕ್ಷ್ಮೀನಾರಾಯಣ ಮಾತನಾಡಿ, ಗ್ರಾಮೀಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಸಂಘ ಸಂಸ್ಥೆಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಲವಾರು ಕೊಡುಗೆಗಳನ್ನು ನೀಡುವ ಪರಿಪಾಠ ಪಾಲಿಸುತ್ತಿರುವುದು ಸ್ವಾಗತಾರ್ಹ ಎಂದರು. ಈ ವೇಳೆ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ರೋಟರಿ ಸಂಸ್ಥೆ ಅಧ್ಯಕ್ಷ ರಾಮಕೃಷ್ಣ, ವಿಶ್ವಮಾನವ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್‌ಗೌಡ ವಿತರಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಚಕ್ರವರ್ತಿ, ಪಾಂಡುರಂಗ, ಶ್ರೀಧರ್‌ಮೂರ್ತಿ, ಗೋವಿಂದಮ್ಮ, ಕೆ.ಎಂ.ವಿ. ಗೌಡ, ಶ್ರೀನಿವಾಸ್ ಇದ್ದರು.