ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ
ಚಿಕ್ಕಬಳ್ಳಾಪುರ: 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಡಿದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದುರುಳ ಬಾಲಕಿಯ ತುಟಿ, ಮುಖವನ್ನು ಕಚ್ಚಿ ಗಾಯಗೊಳಿಸಿರುವುದಲ್ಲದೇ ನಂತರ ಅಸ್ವಸ್ಥ ಬಾಲಕಿಯನ್ನು ಆತನೇ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿ ಇದೀಗ ನಾಪತ್ತೆಯಾಗಿದ್ದಾನೆ.
ಶಿಡ್ಲಘಟ್ಟ ತಾಲೂಕಿನ ಈ ತಿಮ್ಮಸಂದ್ರದಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಶನಿವಾರ ತರಗತಿಯನ್ನು ಮುಗಿಸಿಕೊಂಡು ತಮ್ಮ ಗ್ರಾಮ ಬಾಗೇಪಲ್ಲಿ ತಾಲೂಕಿನ ನೀರಗಟ್ಟಹಳ್ಳಿಗೆ (ಶಿಡ್ಲಘಟ್ಟ ತಾಲೂಕಿನ ಸಮೀಪ) ನಡೆದುಕೊಂಡು ಹೋಗುತ್ತಿದ್ದಳು. ಆ ವೇಳೆ ದ್ವಿಚಕ್ರ ವಾಹನದಲ್ಲಿ ಆಕೆಯನ್ನು ಹಿಂಬಾಲಿಸಿದ ಆರೋಪಿ ಅದೇ ಗ್ರಾಮದ ಗಂಗರಾಜ್(26 ವರ್ಷ) ನಿರ್ಜನ ಪ್ರದೇಶಮೊಂದರಲ್ಲಿ ನಿಲ್ಲಿಸಿ ಮಾತನಾಡಿದ್ದಾನೆ. ಯಾರೂ ಇಲ್ಲದಿರುವುದನ್ನು ಕಂಡು ಸಮೀಪದಲ್ಲಿಯೇ ಇದ್ದ ತೋಪಿನೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕ್ರೂರವಾಗಿ ಆಕೆಯ ತುಟಿಯನ್ನು ಕಚ್ಚಿ ಮುಖದ ಮೇಲೆ ಗಾಯ ಮಾಡಿ ಪೈಶಾಚಿಕವಾಗಿ ವರ್ತಿಸಿದ್ದಾನೆ.
ಆಕೆ ಜೋರಾಗಿ ಕಿರುಚಾಡಿ ಅಸ್ವಸ್ಥಗೊಳ್ಳುತ್ತಿದ್ದಂತೆ ಭಯಭೀತನಾಗಿ ತನ್ನ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದ್ದಾನೆ. ಆ ನಂತರ ಕಣ್ಮರೆಯಾಗಿದ್ದು, ಪ್ರಾರಂಭದಲ್ಲಿ ಅಪಘಾತ ನಡೆದಿರಬಹುದು ಎಂದು ಶಂಕಿಸಲಾಗಿತ್ತು.ಆ ನಂತರ ಗಂಗರಾಜು ಅತ್ಯಾಚಾರಕ್ಕೆ ಯತ್ನಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೊಂದ ವಿದ್ಯಾರ್ಥಿನಿ ಚೇತರಿಸಿಕೊಳ್ಳುತ್ತಿದ್ದಾಳೆ. ಸುದ್ದಿ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ದಿವ್ಯ
ಗೋಪಿನಾಥ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಆರೋಗ್ಯವನ್ನು ವಿಚಾರಿಸಿದ್ದಾರೆ.