ಬೆಳವಣಿಗೆಗೆ ಕ್ರೀಡೆಯೂ ಮುಖ್ಯ
ಮುಳಬಾಗಲು: ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಬೆಳವಣೆಗೆಗಳಿಗೆ ಕ್ರೀಡೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯವೆಂದು ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ. ಜಗನ್ನಾಥ್ ನುಡಿದರು. ತಾಲೂಕಿನ ಮೂಡಿಯನೂರು ಗ್ರಾಮದ ನ್ಯಾಷನಲ್ ಹೈಸ್ಕೂಲಿನಲ್ಲಿ ಬುಧವಾರ ಏರ್ಪಡಿಸಿದ್ದ ದುಗ್ಗಸಂದ್ರ ಹೋಬಳಿ ಮಟ್ಟದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಫಾಟಿಸಿ ಮಾತನಾಡಿದರು. ಕ್ರೀಡೆಗಳಲ್ಲಿ ಸೋಲು ಗೆಲವು ಮುಖ್ಯವಾಗಿರುವುದಿಲ್ಲ. ಎರಡನ್ನೂ ಸಮನ್ವಯವಾಗಿ ತೆಗೆದುಕೊಳ್ಳಬೇಕು. ಅಹಿತಕರವಾದ ವಾತಾವರಣಕ್ಕೆ ಕಾರಣವಾಗಬಾರದು ಎಂದು ನುಡಿದರು.
ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಇ. ಶ್ರೀನಿವಾಸಗೌಡ ಮಾತನಾಡಿ, ವಿದ್ಯಾರ್ಥಿಗಳು ತಪ್ಪದೇ ಶಾಲೆಗಳಲ್ಲಿ ನಡೆಯುವ ಕ್ರೀಡಾ ಕಾರ್ಯಕ್ರಗಳಲ್ಲಿ ಭಾಗವಹಿಸಿ, ನಂತರ ಪ್ರತಿ ಹೋಬಳಿವಾರು ತಾಲ್ಲೂಕುವಾರು ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕವಾಗಿ ಕ್ರೀಡಾಪಟುಗಳಾಗಬೇಕೆಂದು ನುಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಜ್ ಕುಮಾರ್, ಖಜಾಂಚಿ ಮಂಜುನಾಥ್, ಹೈಸ್ಕೂಲ್ ಮುಖ್ಯ ಶಿಕ್ಷಕ ಎಂ.ಎಸ್. ಶ್ರೀನಿವಾಸಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಆರ್ಪಿಗಳಾದ ಕೆ.ಬಿ. ಶಿವಾರೆಡ್ಡಿ, ವರದರಾಜ್ ನಟರಾಜ್, ರಾಜಕುಮಾರ್, ಲಕ್ಷ್ಮಣಸಿಂಗ್, ಶಂಕರಪ್ಪ, ಮುಖ್ಯಶಿಕ್ಷಕರಾದ ಸರೋಜಮ್ಮ, ಎನ್.ಎ. ಭಾಸ್ಕರ್, ದೈಹಿಕ ಶಿಕ್ಷಕ ರಾಜಪ್ಪ ಸೇರಿದಂತೆ ಹೋಬಳಿಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಭಾಗವಹಿಸಿದ್ದರು. ದುಗ್ಗಸಂದ್ರ ವ್ಯಾಪ್ತಿಯ 8 ಪ್ರೌಢಶಾಲೆ 19 ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.