ಸಾಹಿತ್ಯ ಸಮ್ಮೇಳನ ನಾಳೆಯಿಂದ
ಚಿಂತಾಮಣಿ: ಆಗಸ್ಟ್ 1ರಿಂದ ನಡೆಯಲಿರುವ ಚಿಂತಾಮಣಿ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ನಡೆದಿವೆ.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಭಾರತರತ್ನ ಡಾ.ಸಿ.ಎನ್.ಆರ್.ರಾವ್ ವೇದಿಕೆ ಸಜ್ಜಾಗಿದೆ. ಶುಕ್ರವಾರ ಬೆಳಗ್ಗೆ ತಹಸೀಲ್ದಾರ್ ಅವರು ಧ್ವಜಾರೋಹಣ ಮಾಡಲಿದ್ದಾರೆ. ನಾಡಧ್ವಜವನ್ನು ಶಾಸಕ ೆ.ಕೆ.ಕೃಷ್ಣಾರೆಡ್ಡಿ, ಪರಿಷತ್ನ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎ.ಎಸ್.ನಾಗರಾಜ್ ನೆರವೇರಿಸಲಿದ್ದಾರೆ.
ಸಮ್ಮೇಳನವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಆರ್.ರೋಷನ್ ಬೇಗ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೃಷ್ಣಾರೆಡ್ಡಿ ವಹಿಸಲಿದ್ದಾರೆ. ಮೆರವಣಿಗೆಗೆ ನಗರದ ಪ್ರವಾಸಿ ಮಂದಿರದಲ್ಲಿ ಎಸ್ಪಿ ಡಾ.ದಿವ್ಯ ಗೋಪಿನಾಥ್ ಚಾಲನ ೆನೀಡಲಿದ್ದಾರೆ. ಜಿಪಂ ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ತಹಸೀಲ್ದಾರ್ ಹನುಮಂತರೆಡ್ಡಿ, ಇಒ ವಸಂತಕುಮಾರ್, ಬಿಇಒ ಕೆ.ಜಿ.ರಂಗಯ್ಯ, ಪೌರಾಯುಕ್ತ ಜೆ.ಬಿ.ಪದ್ಮನಾಭ್ ಈ ವೇಳೆ ಇರಲಿದ್ದಾರೆ. ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಕೆ.ಆರ್.ಪುರಂ ರಾಧಪ್ರಿಯ ಮತ್ತು ತಂಡದಿಂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆ.3ರಂದು ಭಾನುವಾರ ಬೆಳಿಗ್ಗೆ 9 ರಿಂದ 9.30 ರವರೆಗೆ ಸೂರಪ್ಪಲ್ಲಿ ಚಂದ್ರಶೇಖರ್ ಮತ್ತು ಮಹೇಶ್ ತಂಡದಿಂದ ಜಾನಪದ ಗೀತ ಗಾಯನ, ಓಂ ಸಾಯಿ ಕಲಾನಿಕೇತನ ವಿದ್ಯಾರ್ಥಿಗಳಿಂದ ನೃತ್ಯ, ಕೊಡದವಾಡಿ ಸರ್ಕಾರಿ ಶಾಲೆ ಮಕ್ಕಳಿಂದ ಕೋಲಾಟ ನಡೆಯಲಿದೆ.
ಸಮಾರೋಪ ಸಮಾರಂಭ: ಭಾನುವಾರ ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಸದ ಕೆ.ಎಚ್.ಮುನಿಯಪ್ಪ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಡೆಪ್ಯುಟಿ ಸ್ಪೀಕರ್ ಎಚ್.ಎನ್.ಶಿವಶಂಕರರೆಡ್ಡಿ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಆಗಮಿಸಲಿದ್ದಾರೆ.
ಶಿಕ್ಷಕರ ಸಂಘ ಬೇಸರ
ಸಮ್ಮೇಳನ ಆಹ್ವಾನ ಪತ್ರಿಕೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘವನ್ನು ನಿರ್ಲಕ್ಷಿಸಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ ಬಗ್ಗೆ ಸಂಘದ ಪದಾಧಿಕಾರಿಗಳು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು ದಿನಗಳಿಂದ ದುಡಿಯುತ್ತಿರುವವರನ್ನು ಗುರ್ತಿಸದೆ ಹಾಗೂ ಅಂಥವರ ಹೆಸರನ್ನು ಮುದ್ರಿಸದೆ ಏಕಪಕ್ಷೀಯವಾಗಿ ವರ್ತಿಸಲಾಗಿದೆ. ಇದು ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷ ಸಿ.ಬಿ.ಹನುಮಂತಪ್ಪ ಅವರಿಗೆ ಚಿಂತಾಮಣಿ ತಾಲೂಕು ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರಸಿಂಗ್ ಅವರ ನೇತೃತ್ವದಲ್ಲಿ ಹಲವರು ಶಿಕ್ಷಕರ ಸಮ್ಮುಖದಲ್ಲಿ ಸಮ್ಮೇಳನ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು. ಈ ವೇಳೆ, ಸುಬ್ಬಾರೆಡ್ಡಿ, ಜಿ.ನಾರಾಯಣಸ್ವಾಮಿ, ಎನ್.ನಾಗರಾಜ್, ಆರ್.ಜನಾರ್ದನ್, ಆರ್.ಎನ್.ಶ್ರೀಹರಿ, ನವಶಾದ್ ಪಾಷ, ಶ್ರೀನಿವಾಸರೆಡ್ಡಿ, ಮಹೇಶ್ ಕುಮಾರ್, ಮುನಿವೀರಪ್ಪ ಮತ್ತಿತರರು ಉಪಸ್ಥಿತರಿದ್ದರು.