ಉದಯೋನ್ಮುಖರಿಗೆ ದಾರಿದೀಪವಾದ ಕವಿಗೋಷ್ಠಿ
ಚಿಂತಾಮಣಿ: ಮನೆಗೊಂದು ಕವಿಗೋಷ್ಠಿ ಉದಯೋನ್ಮುಖರಿಗೆ ದಾರಿದೀಪವಾಗಿದೆ ಎಂದು ಹಿರಿಯ ಲೇಖಕ ಬೀರಗಾನಹಳ್ಳಿ ರಮೇಶ್ ಅಭಿಪ್ರಾಯ ಪಟ್ಟರು. ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನಿಂದ ನಗರದ ಚುಸಾಪ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಮನೆಗೊಂದು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಭಯ ಜಿಲ್ಲೆಗಳಲ್ಲೂ ಸೂಕ್ತ ಅವಕಾಶ ಸಿಗದೆ ವಂಚಿತರಾಗಿದ್ದ ನೂರಾರು ಉದಯೋನ್ಮುಖ ಕವಿಗಳಿಗೆ ಮನೆಗೊಂದು ಕವಿಗೋಷ್ಠಿ ಸೂಕ್ತ ವೇದಿಕೆ ಕಲ್ಪಿಸಿದೆ ಎಂದರು. ಚುಸಾಪ ಅಧ್ಯಕ್ಷ ಕಾಗತಿ ವಿ. ವೆಂಕಟರತ್ನಂ ಮಾತನಾಡಿ, ಸಾಹಿತ್ಯ ವೇದಿಕೆ ಹಾಗೂ ಚುಸಾಪಗಳು ಕವಿಗೋಷ್ಠಿಗಳಿಗೆ ಮಾತ್ರ ಸೀಮಿತವಾಗದೆ ಶಾಲಾ-ಕಾಲೇಜುಗಳಲ್ಲಿ ವಿವಿಧ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ಕವಿಗೋಷ್ಠಿಯಲ್ಲಿ ರಾಜೇಶ್ವರಿ ನಾರಾಯಣ್, ವೆಂಕಟಗಿರಿಕೋಟೆ ಸೀತಮ್ಮ, ಪಾತಮುತ್ತಕದಹಳ್ಳಿ ಚಲಪತಿಗೌಡ, ರಾಯಲ್ ಶಿ.ಮ. ಮಂಜುನಾಥ್, ಎಂ.ವಿ. ಅಶ್ವಥನಾರಾಯಣ, ನಂಜಪ್ಪರೆಡ್ಡಿ, ರಾಜೇಶ್, ಮಂಜುನಾಥ್ ಇದ್ದರು.
ಆಷಾಢ ಜಾತ್ರಾ ಮಹೋತ್ಸವ ಇಂದಿನಿಂದ
ಕೆಜಿಎಫ್: ನಗರದ ಗಣೇಶ್ಪುರಂ ಬಡಾವಣೆಯಲ್ಲಿರುವ ಶ್ರೀಗಂಗಮ್ಮ ಶ್ರೀದುರ್ಗಾದೇವಿ ದೇವಾಲಯದಲ್ಲಿ 143ನೇ ವಾರ್ಷಿಕ ಆಷಾಢ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಆ.1 ರಿಂದ 3ರ ವರೆಗೆ ನಡೆಯಲಿವೆ. ಶುಕ್ರವಾರ ಕಂಕಣ ಕಟ್ಟುವುದು, ದೇವಿಯ ಉತ್ಸವ ಮೆರವಣಿಗೆ ನಡೆಯುವುದು. ಶನಿವಾರ ಗಂಗಮ್ಮ ದೇವಿಗೆ ಬೆಳ್ಳಿ ಅಲಂಕಾರ, ಮಹೋತ್ಸವ, ಅನ್ನದಾನ ನಡೆಯುವುದು. ಭಾನುವಾರ ದುರ್ಗಾದೇವಿಗೆ ವಿಶೇಷ ಹೂವಿನಲಂಕಾರ, ಅಭಿಷೇಕ, ಕರಗ ಮಹೋತ್ಸವ ನಡೆಯಲಿದೆ. ಆಷಾಡ ಮಹೋತ್ಸವದ ಪ್ರಯುಕ್ತ ವಿವಿಧ ರೀತಿಯ ಭಕ್ತರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.