ಹಣ ಕಟ್ಟಿದವರಿಗೆ ಶೀಘ್ರ ನಿವೇಶನ
ಮಾಲೂರು: ಈಗಾಗಲೇ ಹಣ ಕಟ್ಟಿ ನಿವೇಶನಕ್ಕಾಗಿ ಕಾಯುತ್ತಿರುವ ಅರ್ಹ ಫಲಾನುಭವಿಗಳಿಗೆ ಶೀಘ್ರವೇ ಪುರಸಭೆ ಸದಸ್ಯರ ಸಹಕಾರದಲ್ಲಿ ನಿವೇಶನ ನೀಡುವುದಾಗಿ ಶಾಸಕ ಮಂಜುನಾಥ ಗೌಡ ಹೇಳಿದರು.
ಪುರಸಭೆಯಲ್ಲಿ ಗುರುವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಹಾಲಿ 650 ಮಂದಿಗೆ ಮಾತ್ರ ನಿವೇಶನ ನೀಡಲು ಸಾಧ್ಯವಾಗುತ್ತಿರುವುದರಿಂದ ಎರಡು ಹಂತದಲ್ಲಿ ನಿವೇಶನ ಹಂಚಲಾಗುವುದು. ನಿವೇಶನ ಪಡೆಯುವ ಪ್ರತಿ ಫಲಾನುಭವಿಗಳಿಂದ ಅಭಿವೃದ್ಧಿ ಶುಲ್ಕವಾಗಿ ತಲಾ ಹತ್ತು ಸಾವಿರ ಪಡೆಯಲಾಗುವುದು. ನಿವೇಶನಗಳನ್ನು ಲಾಟರಿ ಮೂಲಕ ವಿತರಿಸಲಾಗುವುದು ಎಂದರು.
ಪಟ್ಟಣದ ಗಜಗುಂಡ್ಲದಲ್ಲಿ ನೀರು ಸಂಗ್ರಹ ಮಾಡುವುದು ಕಷ್ಟ ಸಾಧ್ಯವಾಗಿರುವುದರಿಂದ ಗಜಗುಂಡ್ಲದಲ್ಲಿ ಸುಸಜ್ಜಿತ ವಾಕ್ಪಾತ್, ಡ್ರಾಮಾ ಸ್ಟೇಜ್ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ನಡೆಸುವ ಸಭಾಂಗಣ ನಿರ್ಮಿಸುವುದು ಸೂಕ್ತ. ಇದಕ್ಕಾಗಿ 2 ಕೋಟಿ ವೆಚ್ಚದ ನೀಲನಕ್ಷೆ ತಯಾರಿಸಲಾಗಿದೆ. ಇದಕ್ಕಾಗಿ ಶಾಸಕರ ನಿಧಿಯಿಂದ 50 ಲಕ್ಷ ನೀಡಲಾಗುವುದು. ಪುರಸಭೆ ವತಿಯಿಂದ 50 ಲಕ್ಷ ನಿರೀಕ್ಷಿಸಲಾಗುತ್ತಿದೆ ಎಂದರು.
ಪುರಸಭೆ ಸದಸ್ಯ ಎಂ.ಪಿ.ವಿಜಯಕುಮಾರ್ ಮಾತನಾಡಿ, ಶಾಸಕರ ಪ್ರಯತ್ನ ಉತ್ತಮವಾಗಿದ್ದರೂ ಕಾಮಗಾರಿಗೆ ಸಂಪನ್ಮೂಲ ಕೊರತೆ ಕಾಡಲಿದೆ. ಅದಲ್ಲದೇ ಹಾಲಿ ಪುರಸಭೆ ವಾರ್ಡ್ಗಳಿಗೆ ಬಂದಿರುವ ಅನುದಾನ ಸಾಕಾಗುದಿಲ್ಲದಿರುವಾಗ 50 ಲಕ್ಷ ಹೆಚ್ಚಿನ ಹೊರೆ ತಡೆಯಲು ಕಷ್ಟವಾಗುತ್ತದೆ ಎಂದರು.
ಆದರೆ ಗಜಗುಂಡ್ಲ ಸಹ ಪಟ್ಟಣದ ಅಭಿವೃದ್ಧಿಯಲ್ಲಿ ಬರುವುದರಿಂದ ಪ್ರತಿ ಸದಸ್ಯ ತನ್ನ ಪಾಲಿನ ಅನುದಾನದಲ್ಲಿ 2 ಲಕ್ಷ ನೀಡಿದರೆ ಸಾಕು ಎಂದ ಶಾಸಕರು, ಇದೇ ರೀತಿ ಒಪನ್ ಜಿಮ್ ಪಾರ್ಕ್ನ್ನು ಪಟ್ಟಣದ ಮೇಲ್ಭಾಗದ ಅರಳೇರಿ ರಸ್ತೆಯಲ್ಲಿ ಶಾಸಕರ ನಿಧಿಯಲ್ಲಿ ನಿರ್ಮಿಸಲಾಗುವುದು. ಗಜಗುಂಡ್ಲ ಅಭಿವೃದ್ಧಿಗೆ ಕಲ್ಯಾಣಿಯ ದಡದಲ್ಲಿರುವ ಮಾರಿಕಾಂಭ ದೇವಾಲಯ ಸಮಿತಿ ಸಂಪೂರ್ಣ ಸಹಕಾರ ನೀಡಬೇಕು. ಪಟ್ಟಣದ ಈ ಅಭಿವೃದ್ಧಿ ಕಾರ್ಯದ ಬಗ್ಗೆ ದೇವಾಲಯ ಸಮಿತಿಯವರು ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ಉಪಾಧ್ಯಕ್ಷೆ ಶ್ರೀವಲ್ಲಿ ರಮೇಶ್, ಹಿರಿಯ ಸದಸ್ಯರಾದ ಸಿ.ಪಿ.ನಾಗರಾಜ್, ವೇಮನ, ರಾಮಮೂರ್ತಿ, ಲಿಂಗೇಶ್, ಅಲೂಮಂಜು, ಸಾದಿಕ್, ಜಾಕೀರ್ ಖಾನ್, ಮುರಳೀಧರ್, ನಾಗರಾಜ್, ರೇಖಾ, ಗುಲಾಬ್ ಜಾನ್, ಗೀತಾ ಇದ್ದರು.