ಅಗತ್ಯವಿರುವೆಡೆ ಟ್ಯಾಂಕರ್ ನೀರು ಸರಬರಾಜಿಗೆ ಡಿಸಿ ಸೂಚನೆ
ಕೋಲಾರ: ಮುಂಗಾರು ಮಳೆ ಜಿಲ್ಲೆಗೆ ನಿರೀಕ್ಷೆಗಿಂತ ಮುಂಚಿತವಾಗಿ ಪ್ರವೇಶ ಮಾಡಿದ್ದು, ಜಿಲ್ಲೆಯಾದ್ಯಂತ ಮಳೆ ಆಗುತ್ತಿರುವುದರಿಂದ ಅಗತ್ಯವಿರುವ ಕಡೆ ಮಾತ್ರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಜೆ ಅವರು ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯವಿರುವ ಕಡೆ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ಉಳಿದ ಟ್ಯಾಂಕರ್ ಗಳನ್ನು ನಿಲ್ಲಿಸುವಂತೆ ತಿಳಿಸಿದರು. ಕೋಲಾರ ಜಿಲ್ಲೆಯ 202 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, 597 ಟ್ರಿಪ್ಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಕೋಲಾರ ತಾಲೂಕಿನ 30 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಬಂಗಾರಪೇಟೆ-69 ಗ್ರಾಮಗಳಿಗೆ, ಮುಳಬಾಗಲು-42, ಶ್ರೀನಿವಾಸಪುರ-37, ಮಾಲೂರು-28 ಗ್ರಾಮಗಳಿಗೆ ನೀರು ಕೊಡಲಾಗುತ್ತಿದ್ದು ಮಳೆ ಹೆಚ್ಚಾಗಿ ಬಿದ್ದಿರುವ ಕಡೆಗೆ ಟ್ಯಾಂಕರ್ ನೀರು ಕಡಿಮೆ ಮಾಡುವಂತೆ ಆದೇಶಿಸಿದರು. ಕೋಲಾರ ಮತ್ತು ಕೆಜಿಎಫ್ ನಗರ ಹಾಗೂ ಪಟ್ಟಣ ಪ್ರದೇಶಗಳ ವಾರ್ಡುಗಳಿಗೆ ಒಟ್ಟು 115 ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ ಎಂದು ಪೌರಸಂಸ್ಥೆಗಳ ಅಧಿಕಾರಿಗಳು ಸಭೆಗೆ ವಿವರಿಸಿದರು.
2014-15ನೇ ಸಾಲಿಗೆ ಕುಡಿಯುವ ನೀರಿಗಾಗಿ ಈತನಕ ಒಟ್ಟು 89.25ಲಕ್ಷ ರು. ವೆಚ್ಚ ಮಾಡಲಾಗಿದ್ದು, ಈ ಪೈಕಿ ನಗರ, ಪಟ್ಟಣ ಪ್ರದೇಶಕ್ಕೆ 80.03 ಲಕ್ಷ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ 9.22ಲಕ್ಷ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರು. 7.12 ಕೋಟಿ ನಷ್ಟ: ಕೋಲಾರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಗೆ ಮಾವಿನ ಕಾಯಿಗಳು ನೆಲಕಚ್ಚಿ ಸುಮಾರು 7.12 ಕೋಟಿ ರು. ನಷ್ಟವುಂಟಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಕೆ.ರವಿ ಮಾತನಾಡಿ, ನಷ್ಟದ ಬಗ್ಗೆ ಸಮಗ್ರ ಮಾಹಿತಿ ತಯಾರಿಸಿ ಸರ್ಕಾರಕ್ಕೆ ವರದಿ ನೀಡುವಂತೆ ತಿಳಿಸಿದರಲ್ಲದೆ, ರೈತರಿಗೆ ಪರಿಹಾರ ದೊರಕಿಸುವಂತೆ ಸೂಚಿಸಿದರು. ಕೃಷಿ ಇಲಾಖೆಯ ಉಪನಿರ್ದೇಶಕ ಚಿಕ್ಕಣ್ಣ ಮಾತನಾಡಿ, ಜನವರಿ 1 ರಿಂದ ಮೇ.31 ರವರೆಗೆ ವಾಡಿಕೆ ಮಳೆ 122.60 ಎಂ.ಎಂ.ಮಳೆಯಾಗಬೇಕಾಗಿದ್ದು, ವಾಸ್ತವವಾಗಿ 96.50 ಎಂ.ಎಂ.ಮಳೆಯಾಗಿದ್ದು, ಶೇ.27.77 ರಷ್ಟು ಮಳೆಯ ಕೊರತೆ ಉಂಟಾಗಿದೆ ಎಂದರು.