ಕಂದಾಯ, ತೆರಿಗೆ ವಸೂಲಿಗೆ ತಾಕೀತು
ಶಿಡ್ಲಘಟ್ಟ: ಪುರಸಭೆಯ ವ್ಯಾಪ್ತಿಗೆ ಸೇರಿದ ಎಲ್ಲಾ ವಾರ್ಡ್ಗಳಿಂದಲೂ ಬಾಕಿ ಉಳಿದಿರುವ ಕಂದಾಯಗಳೂ ಸೇರಿದಂತೆ ಎಲ್ಲಾ ತೆರಿಗೆಗಳು ವಸೂಲಿ ಮಾಡಲು ಸೂಕ್ತ ಕ್ರಮ ಜರುಗಿಸುವಂತೆ ಶಾಸಕ ಎಂ.ರಾಜಣ್ಣ ಮುಖ್ಯಾಧಿಕಾರಿ ಹಾಗೂ ಸದಸ್ಯರಿಗೆ ಸಲಹೆ ನೀಡಿದರು.
ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ 27 ವಾರ್ಡ್ಗಳಲ್ಲಿರುವ ಎಲ್ಲಾ ಸದಸ್ಯರು ಪುರಸಭಾ ಸಿಬ್ಬಂದಿ ಜತೆ ಸೇರಿ ಜನರಿಂದ ಬಾಕಿ ಉಳಿದಿರುವ ತೆರಿಗೆ ವಸೂಲಿ ಮಾಡಲು ಸಹಕರಿಸಿ. ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಚರ್ಚಿಸಲಾಯಿತು. ಅನಧಿಕೃತವಾಗಿ ಸಂಪರ್ಕ ಹೊಂದಿರುವ ಕೊಳಾಯಿಗಳನ್ನು ತೆರವುಗೊಳಿಸಿ, ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ 24 ಕೊಳವೆಬಾವಿಗಳನ್ನು ಖಾಸಗಿಯವರಿಂದ ಪಡೆದುಕೊಂಡಿದ್ದರೂ ನೀರು ಬರುತ್ತಿಲ್ಲ. ಪೈಪ್ಲೈನ್ಗಳ ಮುಖಾಂತರ ತೋಟಗಳಿಗೆ ಸಂಪರ್ಕ ಪಡೆದುಕೊಂಡಿದ್ದು, ಅಂಥ ಕೊಳವೆಬಾವಿಗಳಿಗೆ ಪುರಸಭೆಯಿಂದ ವಿದ್ಯುತ್ ಬಿಲ್ನ್ನು ಪಾವತಿ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಕಸದ ವಿಲೇವಾರಿಗಾಗಿ ಗುತ್ತಿಗೆ ಪಡೆದುಕೊಂಡಿರುವವರು ಪಟ್ಟಣಕ್ಕೆ ಕಾಲಿಡುತ್ತಿಲ್ಲ. ಪುರಸಭೆಯ ಅಧಿಕಾರಿಗಳ ಗುತ್ತಿಗೆದಾರನ ಏಜೆಂಟರುಗಳಂತೆ ವರ್ತನೆ ಮಾಡುತ್ತಿದ್ದು, ಗುತ್ತಿಗೆದಾರನ ಬದಲಾಗಿ ಇವರೇ ಕಾರ್ಮಿಕರಿಗೆ ಸಂಬಳ ಕೊಡುತ್ತಾರೆ. ಪ್ರತಿ ತಿಂಗಳು ಹಣವನ್ನು ಪಡೆಯಲಿಕ್ಕೆ ಮಾತ್ರ ಬರುತ್ತಿದ್ದಾರೆ. ಕೂಡಲೇ ಕಸ ವಿಲೇವಾರಿಯ ಗುತ್ತಿಗೆಯನ್ನು ರದ್ದುಗೊಳಿಸಿ, ಸರಿಯಾಗಿ ಕೆಲಸ ಮಾಡುವವರಿಗೆ ಗುತ್ತಿಗೆಯನ್ನು ನೀಡುವಂತೆ ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಈಗಾಗಲೇ 12 ಗಾಡಿಗಳಿದ್ದು, ಕೆಲವು ವಾರ್ಡ್ಗಳಿಂದ ಕಸವನ್ನು ಸಂಗ್ರಹಣೆ ಮಾಡಲಾಗುತ್ತಿದೆ. ಮುಂದೆ ಅವಶ್ಯವಾಗಿರುವ ಗಾಡಿಗಳನ್ನು ಖರೀದಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಪಟ್ಟಣದಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಾಗಿಲ್ಲ. ಕಳಪೆ ಗುಣಮಟ್ಟದ ಎಲ್ಇಡಿ ದೀಪಗಳನ್ನು ಹಾಕಿ ದುಬಾರಿಯಾಗಿ ಹಣವನ್ನು ಪಡೆದುಕೊಂಡಿದ್ದಾರೆ. ಪುರಸಭೆಯ ಮುಖಾಂತರ ನಡೆಯುತ್ತಿರುವ ಕಾಮಗಾರಿಗಳು ವಿಳಂಬವಾಗಿರುವ ಬಗ್ಗೆ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ, ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಟೆಂಡರ್ ಪ್ರಕ್ರಿಯೆಗಳು ಮುಗಿದಿದ್ದು ಕಾಮಗಾರಿ ಪ್ರಾರಂಭವಾಗದಿರುವ ಕಡೆಯಲ್ಲಿ ಕೂಡಲೇ ಪ್ರಾರಂಭ ಮಾಡಿ, ಕೆಲಸ ಮುಗಿಸುವಂತೆ ಸೂಚಿಸಿದರು.
ಪುರಸಭಾ ಅಧ್ಯಕ್ಷೆ ಮುಷ್ಠರಿತನ್ವಿರ್, ಉಪಾಧ್ಯಕ್ಷೆ ಸುಮಿತ್ರ ರಮೇಶ್, ಮುಖ್ಯಾಧಿಕಾರಿ ರಾಮ್ಪ್ರಕಾಶ್, ಸದಸ್ಯರಾದ ಚಿಕ್ಕಮುನಿಯಪ್ಪ, ಅಪ್ಸರಾ ಪಾಷಾ, ಬಾಲಕೃಷ್ಣ, ಲಕ್ಷ್ಮಯ್ಯ, ಶಫಿ, ಇಲಿಯಾಜ್, ಪ್ರಭಾವತಿ, ಸುಗುಣ, ಸಂಧ್ಯಾ, ಸುಹೇಲ್, ರಾಘವೇಂದ್ರ, ಕಿಶನ್, ವೆಂಕಟಸ್ವಾಮಿ ಮುಂತಾದವರು ಹಾಜರಿದ್ದರು.