ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಿಸಿಸಿ ಬ್ಯಾಂಕ್‌ನಿಂದ ಸ್ವಸಹಾಯ ಗುಂಪುಗಳಿಗೆ 20 ಕೋಟಿ ಸಾಲ

Rashmi Kasaragodu
Updated On : 4 Jun 2014, 1:44 am

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೇ.4 ರ ಬಡ್ಡಿ ದರದಲ್ಲಿ 20 ಕೋಟಿ ರು. ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಡಿಸಿಸಿ ಬ್ಯಾಂಕಿನಲ್ಲಿ ಮಂಗಳವಾರ ನಗರದ ಕನಕನಪಾಳ್ಯದ ಪ್ರಗತಿ ಹಾಗೂ ಪ್ರಕೃತಿ ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರು. ಸಾಲದ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ಮಹಿಳೆಯರಲ್ಲಿ ಸಾಲ ಮರುಪಾವತಿ ಬದ್ಧತೆ ಇರುವುದರಿಂದ ಹಾಗೂ ಇತ್ತೀಚಿನ ದಿನಗಳಲ್ಲಿ ಸಾಲ ಮರುಪಾವತಿಯಲ್ಲಿ ಶೇ.95 ರಷ್ಟು ಮಹಿಳಾ ಗುಂಪುಗಳು ನಂಬಿಕೆ ಉಳಿಸಿಕೊಂಡಿರುವುದರಿಂದ ಹೆಚ್ಚಿನ ಸಾಲ ಸೌಲಭ್ಯ ನೀಡಲು ಬ್ಯಾಂಕ್ ನಿರ್ಧರಿಸಿದೆ ಎಂದು ತಿಳಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಮಹಿಳಾ ಸ್ವಸಹಾಯ ಗುಂಪುಗಳು ಆಯಾ ವ್ಯಾಪ್ತಿಯ ಡಿಸಿಸಿ ಬ್ಯಾಂಕ್‌ನಲ್ಲಿ ವಹಿವಾಟು ನಡೆಸುವಂತೆ ಕೋರಿದ ಅವರು, ಅವರ ವಹಿವಾಟಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ಸೌಲಭ್ಯ ನೀಡಲು ಡಿಸಿಸಿ ಬ್ಯಾಂಕ್ ಬದ್ಧವಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸಭೆ: ಡಿಸಿಸಿ ಬ್ಯಾಂಕಿನಲ್ಲಿ ಹಿಂದೆ ಹಲವು ಸಹಕಾರಿಗಳ, ಅಧಿಕಾರಿಗಳ ಲೋಪದಿಂದಾಗಿ ಸರ್ಕಾರದ ಸಾಲ ಮನ್ನಾ ಮತ್ತಿತರ ಸೌಲಭ್ಯಗಳು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಸಿಕ್ಕಿಲ್ಲವೆಂಬುದನ್ನು ಸರ್ಕಾರದ ಗಮನಕ್ಕೆ ತಂದು ಬ್ಯಾಂಕ್ ಪುನಶ್ಚೇತನ ಹಾಗೂ ಇಲ್ಲಿನ  ರೈತರ ನೆರವಿಗಾಗಿ ಹೆಚ್ಚಿನ ಧನಸಹಾಯ ಕೋರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಜೂ.6 ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದ 313ಸಂಖ್ಯೆಯ ಸಭಾಂಗಣದಲ್ಲಿ ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ಎರಡು ಜಿಲ್ಲೆಗಳ  ಹಾಲಿ, ಮಾಜಿ ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರು ಹಾಗೂ ಹಿರಿಯ ಸಹಕಾರಿಗಳ ಸಭೆ ಕರೆಯಲಾಗಿದ್ದು ಸಭೆಗೆ ಜನಪ್ರತಿನಿಧಿಗಳು ಹಾಜರಾಗುವಂತೆ ಮನವಿ ಮಾಡಿದರು.
ಬ್ಯಾಂಕಿನ ನಿರ್ದೇಶಕರಾದ ಎಂ. ಕೃಷ್ಣೇಗೌಡ, ಶಂಕರನಾರಾಯಣಗೌಡ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ, ವ್ಯವಸ್ಥಾಪಕ ರಾಮಚಂದ್ರ, ಮಹಿಳಾ ಸ್ವಸಹಾಯ ಗುಂಪುಗಳ ಪದಾಧಿಕಾರಿಗಳಾದ ಸರಸ್ವತಿ, ಎಸ್. ದೇವಿ, ರೋಸ್ ಮೇರಿ, ಕವಿತಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement