ದುಬಾರಿ ಸುಂಕ ವಸೂಲಿ: ಆರೋಪ
ಇದು ಶಿಡ್ಲಘಟ್ಟ ಸಂತೆಯ ವ್ಯಾಪಾರಸ್ಥರ ಅಳಲು, ಕೊಡದಿದ್ದರೆ ಬೈಗುಳ ಗ್ಯಾರಂಟಿ
ಶಿಡ್ಲಘಟ್ಟ: ಪುರಸಭೆಯು ನಿಗದಿ ಪಡಿಸಿರುವ ಸುಂಕಕಿಂತಲೂ ಹೆಚ್ಚಿನ ಸುಂಕವನ್ನು ಸಂತೆಯಲ್ಲಿ ವಸೂಲಿ ಮಾಡಲಾಗುತ್ತಿದೆ ಎಂದು ವ್ಯಾಪಾರಸ್ಥರು ಹಾಗೂ ರೈತರು ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆಯಲ್ಲಿ ತರಕಾರಿ, ಸಗಟು ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುವ ವ್ಯಾಪಾರಸ್ಥರಿಂದ ಎರಡು ಪಟ್ಟು ಹೆಚ್ಚಿನ ಸುಂಕ ವಸೂಲಿ ಮಾಡಲಾಗುತ್ತಿದೆ. ಪುರಸಭೆ ಒಂದು ಅಂಗಡಿ 8ರಿಂದ 15 ನಿಗದಿಪಡಿಸಿದೆ. ಆದರೆ, 25ರಿಂದ 30ವರೆಗೂ ವಸೂಲಿ ಮಾಡಲಾಗುತ್ತಿದೆ. ಕಟ್ಟಿಸಿಕೊಂಡ ಹಣಕ್ಕೆ ಬಿಲ್ ಕೂಡಾ ನೀಡುತ್ತಿಲ್ಲ. ನಾವು ಅವರು ಕೇಳಿದಷ್ಟು ಹಣವನ್ನು ಕೊಡದಿದ್ದರೆ, ಮುಂದಿನ ವಾರ ಸಂತೆಯಲ್ಲಿ ಅಂಗಡಿ ಹಾಕಲು ಬಿಡಲ್ಲ ಎಂದು ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದೇ ವೇಳೆ, ಹಳ್ಳಿಗಳಿಂದ ತರಕಾರಿ ತರುವ ರೈತರಿಂದಲೂ ಹೆಚ್ಚು ಸುಂಕ ವಸೂಲಿ ಮಾಡಲಾಗುತ್ತಿದೆ. ಒಂದು ವೇಳೆ ಕೊಡಲು ನಿರಾಕರಿಸಿದರೆ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೆ ಬರವಣಿಗೆಯಲ್ಲಿ ದೂರನ್ನು ಕೊಟ್ಟರೆ ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇವೆ. ನಾವು ದೂರನ್ನು ಕೊಟ್ಟರೆ, ಮುಂದಿನ ವಾರ ಸಂತೆಗೆ ಬಾರದಂತೆ ನಿರ್ಬಂದಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.