ಬಿಜಿಎಂಎಲ್ ಸಮಸ್ಯೆ ನೀಗಿಸಲು ಬಿಜೆಪಿ ಅಧ್ಯಕ್ಷ ಜೋಶಿಗೆ ಮನವಿ
ಕೆಜಿಎಫ್: ಬಿಜಿಎಂಎಲ್ ಕಾರ್ಖಾನೆ ಪುನಶ್ಚೇತನ ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಶ್ರಮಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿ ಶಾಸಕಿ ವೈ.ರಾಮಕ್ಕ, ಬಿಜಿಎಂಎಲ್ ಕಾರ್ಮಿಕ ಸಂಘಗಳ ಒಕ್ಕೂಟ ಹಾಗೂ ಕಾರ್ಮಿಕ ಒಕ್ಕೂಟದ ಕಾರ್ಯಾಧ್ಯಕ್ಷ ವೈ.ಸಂಪಂಗಿ ನೇತೃತ್ವದ ನಿಯೋಗ ಮಂಗಳವಾರ ಮನವಿ ಸಲ್ಲಿಸಿತು.
ಕೇಂದ್ರ ಸರ್ಕಾರದ ವತಿಯಿಂದ ಬಿಜಿಎಂಎಲ್ ಪುನರಾರಂಭ, ಕಾರ್ಮಿಕರಿಗೆ ನೀಡಬೇಕಾದ ಶೇ.100 ವಿಆರ್‌ಎಸ್, ಸರ್ವೀಸ್ ಗ್ರಾಚುಟಿ ಬಡ್ಡಿ ಹಣ, ಬಿಜಿಎಂಎಲ್ ಕಾರ್ಮಿಕರು ವಾಸವಿರು ಮನೆಗಳನ್ನು ತೆರವುಗೊಳಿಸದಂತೆ ಹಾಗೂ ಪರ್ಯಾಯ ಕಾರ್ಖಾನೆ ಸೇರಿದಂತೆ ಇತರೆ ಬೇಡಿಕೆಗಳ ಬಗ್ಗೆ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಕಾರ್ಮಿಕ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ ವೈ.ಸಂಪಂಗಿ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ಗಣಿ ಸಚಿವರಿಗೆ ಹಾಗೂ ರೇಲ್ವೆ ಸಚಿವರಿಗೆ ಮನವಿ ನೀಡಲು ತೆರಳುವ ನಿಯೋಗದ ನೇತೃತ್ವ ವಹಿಸಲು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಬಿಜಿಎಂಎಲ್ ಸಮಸ್ಯೆ ಪರಿಹಾರಕ್ಕೆ ಎಲ್ಲ ಸಹಕಾರ ನೀಡುವ ಭರವಸೆಯನ್ನು ಜೋಶಿ ನೀಡಿದ್ದಾರೆ ಎಂದು ಶಾಸಕಿ ವೈ.ರಾಮಕ್ಕ ತಿಳಿಸಿದ್ದಾರೆ. ಈ ವೇಳೆ, ಬಿಜೆಪಿ ನಗರಾಧ್ಯಕ್ಷ ಸುರೇಶ್‌ನಾರಾಯಣ್, ಕಾರ್ಮಿಕ ಒಕ್ಕೂಟ ಸಂಘದ ಯಶ್ವಂತ್‌ರಾಜ್, ವಿನ್ಸೆಂಟ್, ಎಸ್.ಎ.ಮೊಹ್ಮದ್, ಮನೋಹರನ್ ಸೇರಿ ಅನೇಕರಿದ್ದರು.