ಮನೆಗಳ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ, ಮರ
ಟೇಕಲ್: ಹುಳದೇನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬಿದ್ದ ಗಾಳಿ ಮಳೆಯಿಂದ 7 ಹೆಂಚು ಮನೆಗಳು ಮತ್ತು ಶೀಟ್ ಮನೆಗಳ ಮೇಲೆ 4 ವಿದ್ಯುತ್ ಕಂಬಗಳು ಉರುಳಿ ಬಿದ್ದು, 4 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕರಿಯಪ್ಪನವರ ಮನೆಯ ಮೇಲೆ ನೀಲಗಿರಿ ಮರ ಹಾಗೂ ಪಕ್ಕದಲ್ಲಿ ವಿದ್ಯುತ್ ಕಂಬ ಬಿದ್ದು, ಮನೆ ಸಂಪೂರ್ಣಜಖಂವಾಗಿದೆ. ನಾರಾಯಣಮ್ಮ, ಚೌಡಮ್ಮ, ರಾಧಮ್ಮ, ಉಮಾದೇವಿ, ರಾಮಯ್ಯ, ಬೋಕಾಷ್ ಅವರ ಮನೆಗಳ ಮೇಲ್ಚಾವಣಿ ಉರುಳಿ ಬಿದ್ದು, ಮನೆಯೊಳಗಿನ ಪಾತ್ರೆ ಸಾಮಾನುಗಳು ಮತ್ತು ಬಟ್ಟೆಗಳು, ದಿನಸಿ ನೀರಿಗೆ ಆಹುತಿಯಾಗಿವೆ. ಒಟ್ಟಾರೆ ಗ್ರಾಮದಲ್ಲಿ ಸಂಭವಿಸಿರುವ ಹಾನಿ 4 ಲಕ್ಷಕ್ಕೂ ಹೆಚ್ಚು ಎಂದು ಟೇಕಲ್ ನಾಡಕಚೇರಿ ರೆವಿನ್ಯೂ ಅಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ, ಮನೆಗಳಿಂದ ವಂಚಿತರಾದ ಕುಟುಂಬಗಳಿಗೆ ಕೂಡಲೇ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ, ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ವೇಳೆ, ಗ್ರಾಪಂ ಅಧ್ಯಕ್ಷ ಚಲಪತಿ, ಗ್ರಾಮ ಲೆಕ್ಕಾಧಿಕಾರಿ ಪ್ರೇಮ, ಪಿಡಿಒ ಚೌಡರೆಡ್ಡಿ, ಗ್ರಾಪಂ ಕಾರ್ಯದರ್ಶಿ ಗೋಪಾಲ್, ಬಿಲ್ ಕಲೆಕ್ಟರ್ ಚಂದ್ರಶೇಖರ್, ಬೆಸ್ಕಾಂ ಇಲಾಖೆಯ ಕಮಲೇಶ್, ಗೋಪಾಲ್, ಮುಖಂಡ ಸತೀಶ್ ಉಪಸ್ಥಿತರಿದ್ದರು.