ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಣ್ಣುಗಳ ರಾಜನಿಗೆ ಮಳೆ ಶಾಪ!

Rashmi Kasaragodu
Updated On : 4 Jun 2014, 1:32 am

ಪಾ.ಶ್ರೀ.ಅನಂತರಾಮ್
ಕೋಲಾರ: ದೇಶ-ವಿದೇಶಕ್ಕೆ ವಿವಿಧ ತಳಿಗಳ ಮಾವಿನ ರುಚಿ ತೋರಿಸಿ ಆರ್ಥಿಕವಾಗಿ ಮುಂದುವರೆಯುತ್ತಿದ್ದ ಜಿಲ್ಲೆಯ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಐದಾರು ವರ್ಷಗಳಿಂದ ಮಳೆಯ ಕೊರತೆಯ ನಡುವೆಯೂ ಸಾವಿರಾರು ಟನ್ ಮಾವು ಬೆಳೆದು ಗಳಿಸಿದ ಲಾಭದಿಂದ ಉತ್ತಮ ಜೀವನ ಸಾಗಿಸುತ್ತಿದ್ದ ಮಾವು ಬೆಳೆಗಾರರು, ಕಳೆದ ವರ್ಷ ಮಳೆಯ ಆಭಾವದಿಂದ ಹೆಚ್ಚಿನ ಉತ್ಪಾದನೆ ಇಲ್ಲದೆ ಪಾಲಿಗೆ ಬಂದದ್ದು ಪಂಚಾಮೃತವೆಂದುಕೊಂಡಿದ್ದರು. ಆದರೆ, ಈ ಋತುವಿನಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆಗಾರರು ಮತ್ತಷ್ಟು ಕುಗ್ಗುವಂತಾಗಿದೆ. ಈ ವರ್ಷ ಅಂತರ್ಜಲ ಕುಸಿತದಿಂದಾಗಿ ತೋಟಗಳಲ್ಲಿ ಉಷ್ಣಾಂಶ ಹೆಚ್ಚಳದಿಂದ ನೂರಾರು ಎಕರೆ ಪ್ರದೇಶದಲ್ಲಿ ಮಾವಿನ ಗಿಡಗಳು, ಮರಗಳು ಒಣಗಿ ರೈತರು ಹೆಚ್ಚಿನ ಉತ್ಪಾದನೆ ನಿರೀಕ್ಷೆ ಮಾಡುವುದು ಕಷ್ಟವಾಗಿದೆ.
ಒಣಗಿದ ಗಿಡಗಳು: ಮೇ ಅಂತ್ಯ ಹಾಗೂ ಜೂನ್ ಮೊದಲ ವಾರದಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಸಹಿತ ಮಳೆಯಿಂದಾಗಿ ಮಾವಿನ ಕಾಯಿ ನೆಲಕಚ್ಚಿವೆ. ಈ ವರ್ಷ ಸಕಾಲಕ್ಕೆ ಮಳೆ ಆಗದಿರುವುದು, ಕೊಳವೆ ಬಾವಿಗಳು ಬತ್ತಿರುವುದು, ಹನಿ ನೀರಾವರಿಯ ಮೂಲಕವೂ ಗಿಡಗಳಿಗೆ ನೀರು ಹರಿಸಲಾಗದೆ, ಮಾವಿನ ತೋಟಗಳಲ್ಲಿ ಉಷ್ಣಾಂಶ ಹೆಚ್ಚಾದ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಮಾವಿನ ಗಿಡಗಳು ಒಣಗಿ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ನೀರಿನ ಸಮಸ್ಯೆಯಿಂದ ಒಣಗಿರುವ ಮಾವಿನ ತೋಟಗಳ ಸಮೀಕ್ಷೆಯನ್ನು ಜಿಲ್ಲಾ ತೋಟಗಾರಿಕೆ ಇಲಾಖೆಯ ಮೂಲಕ ಕಳೆದ ತಿಂಗಳು ಮಾಡಿಸಿ ಆಯಾ ತಾಲೂಕು ತಹಸೀಲ್ದಾರ್‌ಗಳಿಗೆ ವರದಿ ನೀಡಿದೆ. ಬರ ಪರಿಹಾರ ನಿಧಿಯ ಮೂಲಕ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ಪರಿಹಾರ ಕಲ್ಪಿಸಲು ವರದಿ ತಯಾರು ಮಾಡಲಾಗುತ್ತಿದೆ.
ನೆಲಕಚ್ಚಿದ ಮಾವು: ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಬಿದ್ದ ಜೋರು ಮಳೆಯಿಂದಾಗಿ ಫಸಲು ತುಂಬಿದ್ದ ಮಾವಿನ ಮರಗಳಿಗೆ ಹಾನಿಯಾಗಿ ಸಾವಿರಾರು ಟನ್ ಮಾವಿನ ಕಾಯಿ ನೆಲಕಚ್ಚಿದೆ. ಕೋಲಾರ ಜಿಲ್ಲೆಯ ಐದು ತಾಲೂಕುಗಳ ಪೈಕಿ ಶ್ರೀನಿವಾಸಪುರ ತಾಲೂಕಿನಲ್ಲಿ ಶೇ.90 ರೈತರು ಮಾವಿನ ಬೆಳೆಯನ್ನು ಆಶ್ರಯಿಸಿದ್ದಾರೆ. ಪ್ರತಿವರ್ಷ 2,64,712 ಮೆಟ್ರಿಕ್ ಟನ್ ಮಾವು ಬೆಳೆಯುತ್ತಾರೆ. ಕಳೆದ ವರ್ಷ ಮಳೆಯ ಅಭಾವದಿಂದಾಗಿ ಶೇ.40ಕ್ಕಿಂತ ಹೆಚ್ಚು ಉತ್ಪಾದನೆ ಕುಸಿತ ಕಂಡರೆ, ಈ ವರ್ಷ ಮಳೆಯ ಆಭಾವ ಹಾಗೂ ಅಕಾಲಿಕ ಮಳೆಯಿಂದಾಗಿ ಶೇ.50ಕ್ಕಿಂತ ಹೆಚ್ಚಿನ ಉತ್ಪಾದನೆ ಕುಂಠಿತವಾಗುವ ಆತಂಕವನ್ನು ರೈತರು ಎದುರಿಸುತ್ತಿದ್ದಾರೆ. ಮುಳಬಾಗುಲು ತಾಲೂಕಿನಲ್ಲಿ 137573 ಟನ್, ಮಾಲೂರಿನಲ್ಲಿ 16107 ಟನ್, ಕೋಲಾರದಲ್ಲಿ 51457 ಟನ್ ಹಾಗೂ ಬಂಗಾರಪೇಟೆಯಲ್ಲಿ 40784 ಟನ್ ಮಾವು ಉತ್ಪಾದನೆಯ ಗುರಿ ಹೊಂದಲಾಗಿದೆ. ಆದರೆ, ಈ ತಾಲೂಕುಗಳಲ್ಲೂ ಅತಿವೃಷ್ಠಿ, ಅನಾವೃಷ್ಠಿಯಿಂದ ಫಸಲು ಪ್ರಮಾಣ ಶೇ.50ಕ್ಕಿಂತ ಕಡಿಮೆಯಾಗುವ ಎಲ್ಲಾ ಲಕ್ಷಣಗಳು ಕಾಣ ಬಂದಿದೆ. ಕಳೆದ ಮೂರು ದಿನಗಳ ಮಳೆಯಿಂದಾಗಿ ಶ್ರೀನಿವಾಸಪುರ ತಾಲೂಕಿನ ಸುಮಾರು 2 ಸಾವಿರ ಎಕರೆ ಹಾಗೂ ಮುಳಬಾಗಲು ತಾಲೂಕಿನ 1 ಸಾವಿರ ಪ್ರದೇಶದಲ್ಲಿ ಮಾವು ನಷ್ಟವಾಗಿದ್ದು, ಎರಡೂ ತಾಲೂಕಿನಲ್ಲಿ 10ರಿಂದ 12 ಸಾವಿರ ಟನ್ ನೆಲ ಕಚ್ಚಿರಬಹುದೆಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.



ಎಲ್ಲೆಲ್ಲಿ ಮಾವಿಗೆ ಹಾನಿ?
ಹೆಚ್ಚಾಗಿ ನೀಲಂ, ಮಲ್ಲಿಕಾ ಬ್ರಾಂಡಿನ ಫಸಲು ಹಾನಿಯಾಗಿದೆ. ಶ್ರೀನಿವಾಸಪುರ ತಾಲೂಕಿನ ಕೋಳಗುರ್ಕಿ, ರೋಣೂರು, ಓಜಿಲಹಳ್ಳಿ, ಪೂರ್ಣಪಲ್ಲಿ, ಅಡವಿಚಂಬಲಕೋಟ, ನೇರ್ನಹಳ್ಳಿ, ನಾರಾಯಣಪುರ, ಕಲ್ಲಿಕುಂಟೆ ಸೇರಿದಂತೆ ಹತ್ತಾರು ಗ್ರಾಮಗಳ ಮಾವಿನ ತೋಟದಲ್ಲಿ ಮಾವು ಹಾಗೂ ಇನ್ನಿತರ ತರಕಾರಿಗಳು ನಾಶವಾಗಿದೆ.
ಮುಳಬಾಗಿಲು ತಾಲೂಕಿನ ಗಂಗಾಪುರ, ಚಾಮರೆಡ್ಡಿಹಳ್ಳಿ, ಜಿ.ವಡ್ಡರಹಳ್ಳಿ, ಪಿಚ್ಚಗುಂಡನಹಳ್ಳಿ, ರಾಮಚಂದ್ರಪುರ, ಶೆಟ್ಟಿಕಲ್ಲು, ಮೇಲಾರಪುರ, ಬೆಸ್ತರಹಳ್ಳಿ, ಅವಣಿ, ಚೋಳನಗುಂಟೆ, ಆರಹಳ್ಳಿ, ಕುಲದೇವಿ ಮುಂತಾದ ಗ್ರಾಮಗಳಲ್ಲೂ ಬಿರುಗಳಿ ಮತ್ತು ಆಲಿಕಲ್ಲು ಮಳೆಯಿಂದ ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿನ ಮಾವು ನೆಲಕಚ್ಚಿದೆ.



ಈಗ ಸುರಿದ ಮಳೆ ಜನವರಿ ಇಲ್ಲವೇ ಫೆಬ್ರವರಿ ತಿಂಗಳಲ್ಲಿ ಆಗಿದ್ದರೆ ಮಾವಿನ ಫಸಲು ಉಳಿಯುತ್ತಿತ್ತು ಮಾತ್ರವಲ್ಲದೆ ಗುಣಮಟ್ಟ ಹೆಚ್ಚುತ್ತಿತ್ತು. ರೈತರಿಗೆ ಈ ಬಾರಿ ಎರಡು ರೀತಿಯ ಹೊಡೆತ ಬಿದ್ದಿದೆ. ಮಳೆಯಿಲ್ಲದೆ ಉಷ್ಣಾಂಶ ಹೆಚ್ಚಾಗಿ ಮಾವಿನ ಮರಗಳು ಒಣದಿರುವುದು ಎರಡನೇಯದು ಬಿರುಗಾಳಿ ಸಹಿತ ಮಳೆಯಿಂದ ಫಸಲು ನೆಲಕಚ್ಚಿರುವುದು. ಕ್ಷೇತ್ರಾಧಿಕಾರಿಗಳು ನೀಡುವ ವರದಿಯನ್ನು ಪರಿಶೀಲಿಸಿ ಅದನ್ನು ಸಂಬಂಧಪಟ್ಟ ತಹಸೀಲ್ದಾರ್ ಅವರಿಗೆ ಕಳುಹಿಸುತ್ತೇವೆ. ನಂತರ ಅದಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದ ನಂತರೇ ಪರಿಹಾರ ಘೋಷಣೆ.
ಟಿ ಚಂದ್ರಶೇಖರ್, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ,ಕೋಲಾರ.

ಒಂದು ಹೆಕ್ಟೇರ್‌ನಲ್ಲಿ ತೋಟಗಾರಿಕೆ ಇಲಾಖೆಯ ಮಾರ್ಗಸೂಚಿ ಪ್ರಕಾರ ಒಂದು ಗಿಡ ನೆಟ್ಟು ಉತ್ತಮ ರೀತಿಯಲ್ಲಿ ಬೆಳೆಸಲು ನೀರು, ಗೊಬ್ಬರ, ಔಷಧಿ, ಆರೈಕೆ ಸೇರಿ ಕನಿಷ್ಟ 2 ಸಾವಿರ ಖರ್ಚು ಮಾಡಬೇಕಾಗುತ್ತದೆ. ಆದರೆ, ಸರ್ಕಾರ ಪ್ರಕೃತಿ ವಿಕೋಪದಿಂದ ಮಾವು ನಾಶವಾದರೆ ಪ್ರತಿ ಹೆಕ್ಟೇರ್‌ಗೆ  ಕೇವಲ 10 ಸಾವಿರ ಪರಿಹಾರ ನೀಡುತ್ತದೆ. ಇದು ಅವೈಜ್ಞಾನಿಕ ತೀರ್ಮಾನವಾಗಿದ್ದು ಸರ್ಕಾರ ಪರಿಹಾರ ಮೊತ್ತ ಹೆಚ್ಚಿಸಲು ಮುಂದಾದರೆ ಮಾತ್ರ ಮಾವು ಬೆಳೆಗಾರರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯ.
ಟಿ ಚಂದ್ರಶೇಖರ್,
ಪ್ರಗತಿಪರ ರೈತ, ನೆನಮನಹಳ್ಳಿ, ಕೋಲಾರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement