ಕಳ್ಳಭಟ್ಟಿ ಬಿಟ್ಟರು, ಹೊಸ ಬದುಕಿಗೆ ಅಡಿಯಿಟ್ಟರು!
ಚಿಕ್ಕಬಳ್ಳಾಪುರ: ಬೇರೆಯವರ ಪ್ರಾಣಕ್ಕೆ ಆಪತ್ತು ತರುವ ಕೆಲಸವನ್ನು ಬಿಟ್ಟು ಒಳ್ಳೆಯ ವೃತ್ತಿಯನ್ನು ಆರಿಸಿಕೊಂಡರು. ಕಾಸು ಸಂಪಾದನೆಗಾಗಿ ಭಯದಲ್ಲಿಯೇ ಕದ್ದು ಮುಚ್ಚಿ ಮಾಡುತ್ತಿದ್ದ ದಂಧೆಗೆ ಕೊನೆಗೂ ಗುಡ್ ಬೈ ಹೇಳಿ ರಾಜಾರೋಷವಾಗಿ ಸ್ವಯಂ ಉದ್ಯೋಗ ಕೈಗೊಳ್ಳುವತ್ತ ಮುಂದಡಿ ಇಟ್ಟರು.
ಇದು ಕಳ್ಳಭಟ್ಟಿ ನಂಬಿ ಬದುಕುತ್ತಿದ್ದವರ ಹೊಸ ದಾರಿಯಲ್ಲಿನ ಪಯಣ. ಕಳ್ಳಭಟ್ಟಿಯನ್ನು ಬಿಟ್ಟು ಕುರಿ, ಹಸು ಸಾಕಾಣಿಕೆ, ಕೃಷಿ ಸೇರಿದಂತೆ ಇತರೆ ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧೆಡೆ ಕಳ್ಳಭಟ್ಟಿ ದಂಧೆಯನ್ನು ನಡೆಸುತ್ತಿದ್ದವರನ್ನು ಪತ್ತೆ ಹಚ್ಚಿ ಅರಿವು ಮೂಢಿಸುವ ಮೂಲಕ ಅಬಕಾರಿ ಇಲಾಖೆ ಹಲವರನ್ನು ಆ ದಂಧೆಯಿಂದ ಹೊರ ಬರುವಂತೆ ಮಾಡಿದೆ. ಅಲ್ಲದೇ ಹೊಸ ವೃತ್ತಿಯನ್ನು ಆರಂಭಿಸಲು ವಿವಿಧ ಇಲಾಖೆಗಳಿಂದ ಸಹಾಯ ಧನ ಮತ್ತು ಸಾಲ ಸೌಲಭ್ಯವನ್ನು ದೊರಕಿಸಿಕೊಟ್ಟಿದೆ. ಇದರಿಂದ ಹೊಸ ಕೆಲಸವನ್ನು ಕೈಗೊಳ್ಳಲು ಕಳ್ಳಭಟ್ಟಿ ಮಾಜಿ ದಂಧೆಕೋರರು ಇದೀಗ ಮುಂದಾಗಿದ್ದಾರೆ. ಹೀಗಿದಾಗ್ಯೂ, ಕಳ್ಳಭಟ್ಟಿ, ಸೇಂಧಿ ಮಾರಾಟ ಕದ್ದು ಮುಚ್ಚಿ ನಡೆಯುತ್ತಲೇ ಇದೆ. ಕೆಲವರು ಕೂಲಿ ಕಾರ್ಮಿಕರನ್ನಿಟ್ಟುಕೊಂಡು ಅಕ್ರಮ ಕಳ್ಳಭಟ್ಟಿಯನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಬಕಾರಿ ಇಲಾಖೆ ಪದೇ ಪದೇ ದಾಳಿ ನಡೆಸಿದರೂ ಸಹ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ದಂಧೆಯನ್ನು ಕೈಗೊಳ್ಳುತ್ತಿದ್ದಾರೆ.
ಸಮರ್ಪಕವಾಗಿ ಮಳೆ ಬೀಳದೇ, ಕೈಗೆ ಬೆಳೆ ಬಾರದೇ, ಇತ್ತ ಉದ್ಯೋಗವಿಲ್ಲದೇ ಬಡತನದ ಬೇಗೆಯಿಂದ ನಲುಗುವಂಥವರಿಗೆ ಹೆಚ್ಚಿಗೆ ದಿನಗೂಲಿಯನ್ನು ನೀಡಿ ಈ ದಂಧೆಯಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಕಾಡು ಪ್ರದೇಶಗಳಲ್ಲಿ ಕದ್ದು ಮುಚ್ಚಿ ಕಳ್ಳಭಟ್ಟಿಯನ್ನು ತಯಾರಿಸಿ ವಿವಿಧೆಡೆ ಸಾಗಣೆ ಮಾಡಲಾಗುತ್ತದೆ. ಕಳ್ಳಭಟ್ಟಿ ದಂಧೆಯನ್ನು ನಿಷೇಧಿಸಲಾಗಿದೆ. ಆದರೂ ಸಹ ಸ್ವಾರ್ಥ ಲಾಭಕ್ಕಾಗಿ ಹಲವರು ತಮ್ಮನ್ನು ದಂಧೆಯಲ್ಲಿ ತೊಡಗಿಸಿಕೊಂಡು ಅಮಾಯಕರನ್ನು ಸಹ ತಮ್ಮ ಜೊತೆ ಸೇರಿಸಿಕೊಳ್ಳುತ್ತಿದ್ದಾರೆ. ಕೂಲಿಗಾಗಿ ದಂಧೆಗೆ ಸೇರಿಕೊಂಡವರು ಜೈಲು ಶಿಕ್ಷೆಯನ್ನು ಅನುಭವಿಸಿ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.