ಕಳ್ಳು ಬಿಟ್ಟವರಿಗೆ ಚೆಕ್ ವಿತರಣೆ
ಅಬಕಾರಿ ಇಲಾಖೆ ಅಧಿಕಾರಿಗಳು ವಾರದಲ್ಲಿ ಹಲವೆಡೆ ಸಭೆಗಳನ್ನು ಹಮ್ಮಿಕೊಂಡು ಕಳ್ಳಭಟ್ಟಿ ಮಾರಾಟ ದಂಧೆ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ದಂಧೆ ನಡೆಯುತ್ತಿರುವ ಸ್ಥಳಗಳನ್ನು ಗುರುತಿಸಿ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುವುದು ಮಾತ್ರವಲ್ಲ, ಅವರಿಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಕಳ್ಳಭಟ್ಟಿಯಲ್ಲಿ ತೊಡಗಿದ್ದ ಜಿಲ್ಲೆಯ 47 ಮಂದಿಯನ್ನು ಗುರುತಿಸಿ, ತಲಾ 50 ಸಾವಿರ ಹಾಗೂ 80 ಸಾವಿರ ಸಹಾಯಧನ ಒದಗಿಸಲಾಗಿದೆ. ಗುರುವಾರ ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ 19 ಫಲಾನುಭವಿಗಳಿಗೆ ಚೆಕ್ ವಿತರಿಸಿದರು.
ಮನೆ ದರೋಡೆ ಪ್ರಕರಣ ಭೇದಿಸಿದ ಪೊಲೀಸರು
ಚಿಂತಾಮಣಿ: ಚಿನ್ನಾಭರಣ ಹಾಗೂ ದ್ವಿಚಕ್ರವಾಹನ ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ನಗರದ ಅಶ್ವಿನಿ ಬಡಾವಣೆಯ ವೆಂಕಟರವಣಪ್ಪ ಅವರ ಮನೆಯನ್ನು ಕಳ್ಳರು ಮೇ 23ರಂದು ದರೋಡೆ ಮಾಡಿದ್ದರು. ವಿಶೇಷ ಎಂದರೆ, ವೆಂಕಟರವಣಪ್ಪ ಅವರ ಸಂಬಂಧಿಗಳೇ ಈ ಕಳ್ಳತನದ ರೂವಾರಿ.
ಆಂಧ್ರ ಹೊರ್ಲಕೊಂಡದಲ್ಲಿರುವ ವೆಂಕಟರವಣಪ್ಪ ಅವರ ನಾದಿನಿ ಈಶ್ವರಮ್ಮ, ಅವರ ಗಂಡ ಶಿವಶಂಕರ್ ಮತ್ತು ಹಾಗೂ ಆತನ ಸ್ನೇಹಿತ ಈ ಕಳ್ಳತನದ ರೂವಾರಿಗಳು. ವೆಂಕಟರವಣಪ್ಪ ಊರಲ್ಲಿ ಇಲ್ಲಿದಿರುವುದನ್ನು ಗಮನಿಸಿದ ಇವರು ನಕಲಿ ಕೀ ಬಳಸಿ ಮನೆಯಲ್ಲಿದ್ದ 3 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಹೊರಗಿದ್ದ ದ್ವಿಚಕ್ರವಾಹನವನ್ನು ಕಳವು ಮಾಡಿದ್ದರು. ಆಂಧ್ರದ ಅನಂತಪುರ, ಪೆನಗೊಂಡ, ಮದನಪಲ್ಲಿ, ಕಮ್ಮಚೆರವುಗಳಲ್ಲಿ ಕಳವು ಮಾಡಿದ ಆಭರಣ, ಬೈಕ್ ಮಾರಾಟ ಮಾಡಿರುವುದಾಗಿ ಬಂಧಿತ ವೆಂಕಟರಾಯಪ್ಪ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಅನಂತಪುರದಿಂದ ಚಿಂತಾಮಣಿಗೆ ಕರೆತರಲಾಗುತ್ತಿದೆ ಎಂದು ಪೊಲೀಸ್ ಅಪರಾಧ ವಿಭಾಗದ ಪಿಎಸ್ಐ ಬಸವರಾಜ್ ತಿಳಿಸಿದ್ದಾರೆ.