ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಲಾಕ್ಕೂ ಬೆಂಗಳೂರು ಕೊಳಚೆ!

Rashmi Kasaragodu
Updated On : 6 Jun 2014, 2:19 am

ಎಲೆಮಲ್ಲಪ್ಪಶೆಟ್ಟಿ ಯೋಜನೆ ಬದಲಿಗೆ ಬೆಳ್ಳಂದೂರು ಕೆರೆಯ ನೀರು ಪೂರೈಕೆಗೆ ಚಿಂತನೆ
ಸಂಗ್ರಹವಾಗುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ಹರಿಸುವ ಹೊಸ ಯೋಜನೆ


ಟಿ ಪಾ.ಶ್ರೀ.ಅನಂತರಾಮ್
ಕೋಲಾರ: ಕೋಲಾರ ಜಿಲ್ಲೆಯ ಕೆರೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆ.ಆರ್.ಪುರಂ ಬಳಿಯ ಎಲೆಮಲ್ಲಪ್ಪ ಶೆಟ್ಟಿ ಕೆರೆಯ ಶುದ್ಧೀಕರಣಗೊಂಡ ನೀರಿನಿಂದ ತುಂಬಬೇಕಿತ್ತು. ಆದರೆ ಇದೀಗ ಬೆಂಗಳೂರು ನಗರದ ಬೆಳ್ಳಂದೂರು ಕೆರೆಯ ಸಮೀಪದ ಕೋರಮಂಗಲ-ಚಲಘಟ್ಟ ತ್ಯಾಜ ನೀರು ಸಂಸ್ಕರಣ ಘಟಕದಿಂದ ನೀರು ಹರಿಸುವ ಬಗ್ಗೆ ಚಿಂತನೆ ನಡೆದಿದೆ.
ಜಿಲ್ಲೆಯ ಅಂತರ್ಜಲ ಮಟ್ಟ ಪ್ರಸ್ತುತ ಸುಮಾರು 366 ಮೀಟರ್‌ಗಳಷ್ಟು ಆಳಕ್ಕೆ ಇಳಿದಿದೆ. ಶೇ.180ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಕೆಯಾಗುತ್ತಿದೆ. ಪ್ಲೋರೈಡ್ ಹಾಗೂ ಇತರೆ ಲವಣಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಪರಿಸ್ಥಿತಿ ಹೀಗೇ ಮುಂದುವರಿದರೆ ಜಿಲ್ಲೆಯ ಅಂತರ್ಜಲ ಸಂಪೂರ್ಣ ಬತ್ತಿ ತೊಟ್ಟು ನೀರೂ ಸಿಗುವುದು ಕಷ್ಟ ಎಂಬ ವರದಿ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿ ಸಭೆ ನಡೆದು 2013ರಲ್ಲಿ ಎಲೆಮಲ್ಲಪ್ಪ ಶೆಟ್ಟಿ ಕೆರೆಯಿಂದ ಸಂಸ್ಕರಿಸಿದ ನೀರನ್ನು ಹೊಸಕೋಟೆ ತಾಲೂಕು ಮತ್ತು ಕೋಲಾರ ಜಿಲ್ಲೆಗೆ ಪೂರೈಸುವ ಸಾಧ್ಯತೆಗಳ ಪರಿಶೀಲನೆಗೆ ಪ್ರಾದೇಶಿಕ ಆಯುಕ್ತರು ಕೋಲಾರ ಜಿಲ್ಲಾಧಿಕಾರಿಗೆ ಸೂಚಿಸಿದ್ದರು.
ಪರಿಷ್ಕೃತ ಯೋಜನೆ: ಆದರೆ ಎಲೆಮಲ್ಲಪ್ಪ ಕೆರೆಯಿಂದ ಈಗಾಗಲೇ ಬೇರೆಡೆಗಳಿಗೆ ನೀರು ಬಳಕೆ ಆಗುತ್ತಿರುವುದರಿಂದ ಕೋಲಾರಕ್ಕೆ ಹರಿಸಲು ಕಷ್ಟವಾಗುತ್ತದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಬೆಂಗಳೂರು ನಗರದ ಬೆಳ್ಳಂದೂರು ಕೆರೆಯಲ್ಲಿ ಸಂಗ್ರಹಣೆ ಆಗುತ್ತಿರುವ ಅಧಿಕವಾದ ತ್ಯಾಜ್ಯ ನೀರನ್ನು ಕೋರಮಂಗಲ-ಚಲ್ಲಘಟ್ಟ ತ್ಯಾಜ ನೀರು ಸಂಸ್ಕರಣ ಘಟಕದ ಮೂಲಕ ಕೋಲಾರ ಜಿಲ್ಲೆಯ ಕೆರೆಗಳಿಗೆ ಒದಗಿಸುವ ಪರಿಷ್ಕೃತ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ.
ಸದರಿ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ರೇಖಾ ಅಂದಾಜಿನೊಂದಿಗೆ ಕ್ರಿಯಾಯೋಜನೆ ತಯಾರಿಸಿರುವ ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತರ ಸಲಹೆಯಂತೆ ತಮ್ಮದೇ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದಾರೆ.
ಈ ಸಮಿತಿಯಲ್ಲಿ ಕೋಲಾರ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಇಇ ಎಸ್.ಎನ್. ಕೃಷ್ಣಪ್ಪ, ಬೆಂಗಳೂರಿನ ಕೆರೆ ಅಭಿವೃದ್ಧಿ ಪ್ರಾಧಿಕಾರದ ಇಇ ನಾಗರಾಜು, ಕೋಲಾರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ ಪುಟ್ಟಸ್ವಾಮಿ, ಬೆಂಗಳೂರಿನ ಉಪ ಅಭಿವೃದ್ಧಿ ಅಧಿಕಾರಿ ಹಾಗೂ ಕೆಐಎಡಿಬಿಯ ಇಇ ಜಯೇಂದ್ರ ಹಾಗೂ ಕರ್ನಾಟಕ ರಾಜ್ಯ ಮಾವಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಯತೀಶ್ ಸದಸ್ಯರಾಗಿದ್ದಾರೆ.
ಈ ಸಮಿತಿಯವರು ಬೆಂಗಳೂರು ನಗರದ ಬೆಳ್ಳಂದೂರು ಕೆರೆ ವ್ಯಾಪ್ತಿಯ ಕಾಡುಬೀಸನಹಳ್ಳಿ, ಕೋರಮಂಗಲ-ಚಿಲ್ಲಘಟ್ಟ ಹಾಗೂ ಸಂಸ್ಕರಣಾ ಘಟಕದ ಕಾಮಗಾರಿ ಪ್ರಗತಿಯಲ್ಲಿರುವ ವರ್ತೂರ್ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿಗೆ ಭೇಟಿ ನೀಡಿ ನಂತರ ಹೊಸಕೋಟೆ ಮಾರ್ಗವಾಗಿ ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಆರಾಭಿಕೊತ್ತನೂರುವರೆಗೆ ಏರುಕೊಳವೆ ಅಳವಡಿಸುವ ಅಲೈನ್‌ಮೆಂಟ್ ಸ್ಥಳವನ್ನು ವೀಕ್ಷಿಸಿ ಮೇ 20ರಂದು ಮತ್ತೊಂದು ಸಭೆ ಸೇರಿ ಯೋಜನೆ ವರದಿ ಸಿದ್ಧಪಡಿಸಿದೆ.
ಸರ್ಕಾರಕ್ಕೆ ವರದಿ ಸಲ್ಲಿಕೆ: ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಯೋಜನೆ ರೂಪಿಸಿ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ.
ಕೋರಮಂಗಲ-ಚಲ್ಲಘಟ್ಟ ವ್ಯಾಲಿಯ ಮಲೀನ ನೀರಿನ ಶುದ್ಧೀಕರಣ ಘಟಕದಿಂದ ಲಭ್ಯವಿರುವ 240 ಎಂ.ಎಲ್.ಡಿ ಶುದ್ಧೀಕರಿಸಿದ ನೀರನ್ನು ಸಂಪೂರ್ಣವಾಗಿ ಪಂಪಿಂಗ್ ಮುಖೇನ ನಾಲ್ಕು ಸರಣಿಗಳಲ್ಲಿ ಒಟ್ಟು 47 ಕೆರೆಗಳಿಗೆ ನೀರನ್ನು ತುಂಬಿಸಲು ಯೋಜಿಸಿ ಅಂದಾಜು 1110 ಕೋಟಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ಮೇ 22ರಂದು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಲಾಗಿತ್ತು. ಬಳಿಕ ಅಂದಾಜು ವೆಚ್ಚವನ್ನು ಮಿತಿಗೊಳಿಸಲು ಹಾಗೂ 150 ಎಂ.ಎಲ್.ಡಿ ನೀರನ್ನು ಒದಗಿಸಲು ಉದ್ದೇಶಿಸಿ ಪರಿಷ್ಕೃತ ಯೋಜನೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರ ಪ್ರಕಾರ ಕೋಲಾರ ಜಿಲ್ಲೆಯ ಆರಾಭಿಕೊತ್ತನೂರು ಕೆರೆ ಸಮೀಪದ ಎತ್ತರ ಭಾಗಕ್ಕೆ ನೀರು ತಂದು ನಂತರ 1 ಮತ್ತು 2ನೇ ಸರಣಿಗಳ ಒಟ್ಟು 20 ಕೆರೆಗಳಿಗೆ ನೀರು ತುಂಬಿಸಲು ಚಿಂತನೆ ನಡೆದಿದೆ.



ಭೂಸ್ವಾಧೀನಕ್ಕೆ 10 ಕೋಟಿ
ಈ ಯೋಜನೆಗಾಗಿ ಭೂ ಸ್ವಾಧೀನಕ್ಕೆ ಕೇವಲ 10 ಕೋಟಿ ನಿಗದಿಪಡಿಸಿದ್ದು ರೈತರು ಯೋಜನೆಗೆ ಬೇಕಾದ ಭೂಮಿಯನ್ನು ಕಡಿಮೆ ಬೆಲೆಗೆ ನೀಡುವರೇ ಎಂಬುದು ಅನುಮಾನಕ್ಕೆ ಕಾರಣವಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement