ಡಿಸಿ ಕಚೇರಿ ಎದುರು ಪ್ರತಿಭಟನೆ
ಕೋಲಾರ: ರೈತ ಮತ್ತು ಕೃಷಿ ಕೂಲಿಕಾರರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿಯನ್ನು ನಡೆಸಲಾಯಿತು.
ಬಗರ್ಹುಕುಂ ಸಾಗುವಳಿ ಭೂಮಿಯನ್ನು ಸಕ್ರಮ ಮಾಡಬೇಕು. ವಿಲೇವಾರಿಯಾಗದಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಸಕ್ರಮ ಮಾಡಬೇಕು. ತಿರಸ್ಕರಿಸಲ್ಪಟ್ಟಿರುವ ಅರ್ಜಿಗಳನ್ನು ಪುನರ್ ಪರಿಶೀಲನೆ ಮಾಡಬೇಕು. ಹೊಸ ಅರ್ಜಿ ಹಾಕಿಕೊಳ್ಳಲು ಅವಕಾಶ ನೀಡಬೇಕು, ಬಲವಂತ ಭೂಸ್ವಾಧೀನ ಕೈಬಿಡಬೇಕು. ಭೂಸ್ವಾಧೀನ ಕಾಯ್ದೆ 2014ಕ್ಕೆ ಇನ್ನಷ್ಟು ರೈತ ಪರ ತಿದ್ದುಪಡಿಗಳು ತರಬೇಕು, ಎಲ್ಲಾ ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು ಆಗ್ರಹಿಸಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅರ್ಜಿ ಹಾಕಿದ ಎಲ್ಲರಿಗೂ ಕೆಲಸ ಕೊಡಬೇಕು. ಕೂಲಿಕಾರರಿಗೆ ಕನಿಷ್ಠ ಕೂಲಿ ದಿನಕ್ಕೆ 300 ರು. ನಿಗದಿಯಾಗಬೇಕು. ವರ್ಷದಲ್ಲಿ ಕುಟುಂಬವೊಂದಕ್ಕೆ 200 ದಿನ ಕೆಲಸ ನೀಡಬೇಕು. ಕೂಲಿ ಹಣ ಪಾವತಿ ಮಾಡುವಲ್ಲಿ ವಿಳಂಬವಾಗದಂತೆ ಸರ್ಕಾರ ಕ್ರಮ ವಹಿಸಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆಗಳು ಇರುವ ಕಡೆ ಅವುಗಳನ್ನು ಬಗೆಹರಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾಡು ಪ್ರಾಣಿಗಳನ್ನು ರಕ್ಷಿಸಲು ಪ್ರತಿ ಅರಣ್ಯದಲ್ಲೂ ಕೊಳವೆಬಾವಿ ಕೊರೆದು ನೀರಿನ ಹೊಂಡಗಳನ್ನು ನಿರ್ಮಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳೊಂದಿಗೆ ಜೂ. 15ರ ನಂತರ ಜಿಲ್ಲಾಧಿಕಾರಿಗಳು ಸಮ್ಮುಖದಲ್ಲಿ ಸಭೆ ನಡೆಸುವುದಾಗಿ ಅಪರ ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಕೆಪಿಆರ್ಎಸ್ಸಿ ಜಿಲ್ಲಾಧ್ಯಕ್ಷರಾದ ಸೂರ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ಉಪಾಧ್ಯಕ್ಷ ಟಿ. ಕೃಷ್ಣೇಗೌಡ, ಸಹ ಕಾರ್ಯದರ್ಶಿಗಳಾದ ಗಂಗಮ್ಮ, ಪಿ.ಆರ್. ನವೀನ್ಕುಮಾರ್, ಮುಖಂಡರಾದ ಪಿ.ಶ್ರೀನಿವಾಸ್, ವಿ.ನಾರಾಯಣರೆಡ್ಡಿ, ಕುರ್ಕಿ ದೇವರಾಜ್, ಎಸ್. ರಮೇಶ್, ಬಿ.ಸಿ. ರಾಮರೆಡ್ಡಿ, ಪಿ. ರಾಮಮೂರ್ತಿ, ಮಂಜಮ್ಮ, ರತ್ನಮ್ಮ, ಮಂಗಮ್ಮ, ಮುನಿಸ್ವಾಮಿ, ಕೆ.ಎಂ. ವೆಂಕಟೇಶ್, ಗಂಗಟ್ಟ ಯಲ್ಲಪ್ಪ ಇದ್ದರು.