ತಾಪಂ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ
ಬಂಗಾರಪೇಟೆ: ಕಳೆದ 2 ತಿಂಗಳಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ಕಲ್ಪಿಸಿಲ್ಲ ಎಂದು ಆರೋಪಿಸಿ ಬೆಂಗನೂರು ಪಂಚಾಯ್ತಿ ಮರವಹಳ್ಳಿ ಗ್ರಾಮಸ್ಥರು, ಸ್ತ್ರೀ ಶಕ್ತಿ ಮಹಿಳಾ ಸಂಘಗಳ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಮರವಹಳ್ಳಿ ಗ್ರಾಮದಲ್ಲಿ ಸುಮಾರು 150 ಕುಟುಂಬಗಳಿದ್ದು ಕಳೆದ ಮೂರು ತಿಂಗಳಿಂದ ಕೊಳವೆಬಾವಿ ಬತ್ತಿ ಹೋಗಿರುತ್ತದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು ದಿನಕ್ಕೆ 1 ಟ್ಯಾಂಕರ್ ನೀರು ಸರಬರಾಜಾಗುತ್ತಿದ್ದು ಪ್ರತಿ ಮನೆಗೆ 6 ಬಿಂದಿಗೆ ನೀರು ಸಿಗುತ್ತಿದ್ದು ಇದು ಸಾಕಾಗದೆ ತುಂಬಾ ಕಷ್ಟವಾಗುತ್ತಿದೆ ಎಂದು ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ತಾಪಂ ಉಪಾಧ್ಯಕ್ಷ ಸಂಪಂಗಿರೆಡ್ಡಿ, ಇಂಜಿನಿಯರ್ ರವಿಚಂದ್ರ, ಪಿ.ಡಿ.ಒ ಪಿ. ನಾರಾಯಣಪ್ಪ, ಕಾರ್ಯದರ್ಶಿ ಚಂದ್ರಪ್ಪ, ಮುಖಂಡರಾದ ಚಕ್ರವರ್ತಿ, ಬಾಲಚಂದ್ರ ಮೊದಲಾದವರು ಪ್ರತಿಭಟನಾ ನಿರತರ ಜೊತೆ ಚರ್ಚಿಸಿ 15 ದಿನಗಳ ಒಳಗೆ ಕೊಳವೆಬಾವಿ ಕೊರೆಸುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಸ್ತ್ರೀ ಶಕ್ತಿ ಸಂಘಗಳಾದ ಭುವನೇಶ್ವರಿ, ಕನ್ನಡಾಂಬೆ, ಮಾರಿಯಮ್ಮ ಸ್ವಸಹಾಯ ಸಂಘಗಳ ರಾದ, ಗೀತ, ನೀಲಮ್ಮ, ಚಿನ್ನಮ್ಮ, ರೇಣುಕಾ, ಪ್ರಮೀಳ ಮೊದಲಾದವರಿದ್ದರು.