ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಪರಿಸರ ಸಮತೋಲನ ಕಾಪಾಡಿ'

Rashmi Kasaragodu
Updated On : 6 Jun 2014, 2:24 am

ಚಿಕ್ಕಬಳ್ಳಾಪುರ: ಪರಿಸರ ಅಸಮತೋಲನವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ ಎಚ್ಚರಿಸಿದರು.
ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ ಮತ್ತು ಪಂಚಗಿರಿ ಬೋಧನಾ ಶಾಲೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಾಗುತ್ತಲೇ ಇದೆ. ಇದು ಹೀಗೆ ಮುಂದುವರೆದರೆ ಹಿಮ ಕರಗುವುದು ಹೆಚ್ಚಳವಾಗಿ ಸಾಗರದ ಮಟ್ಟ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ಹಸಿರು ಸಂಪತ್ತು ನಾಶವಾಗುವಂತಹುದು ಹೆಚ್ಚಾಗುತ್ತಿದೆ. ಕೈಗಾರಿಕೆಗಳು ಮತ್ತು ವಾಹನಗಳಿಂದ ವಾಯು ಮಾಲಿನ್ಯ ಉಂಟಾಗಿ ಜೀವ ಸಂಕುಲ ತೊಂದರೆಗೆ ಸಿಲುಕುತ್ತಿವೆ. ಇದೀಗ ವಿವಿಧ ಸಂಶೋಧನೆ ನಡೆಸಲು ಸಾವಿರಾರು ಕೃತಕ ಉಪಗ್ರಹಗಳನ್ನು ಉಡಾಯಿಸುತ್ತಿದ್ದು ಅವುಗಳ ಆಯಸ್ಸು ಮುಗಿದ ನಂತರ ಅಂತರಿಕ್ಷದಲ್ಲಿ ಉಪಗ್ರಹಗಳು ಒಂದಕ್ಕೊಂದು ಡಿಕ್ಕಿ ಒಡೆದುಕೊಳ್ಳುವ ಪರಿಣಾಮ ಅಂತರಿಕ್ಷವು ಮಲೀನವಾಗುತ್ತಿದೆ ಎಂದರು.
ಪರಿಸರ ಸಂರಕ್ಷಣಾ ಕಾರ್ಯಗಳು ಹೆಚ್ಚಿಗೆ ನಡೆಯಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚೆತ್ತುಕೊಂಡು ಪರಿಸರವನ್ನು ಕಾಪಾಡಿದರೆ ಜೀವ ಸಂಕುಲಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು. ಹೆಚ್ಚುವರಿ ನ್ಯಾಯಾಧೀಶರಾದ ಜಿ.ವಿ. ತುರುಮುರಿ, ಎಸ್. ಶೋಭಾ, ನಳಿನಿಕುಮಾರಿ, ವಕೀಲರ ಸಂಘದ ಅಧ್ಯಕ್ಷ  ಕೆ.ಎಚ್. ತಮ್ಮೇಗೌಡ, ಸಾಮಾಜಿಕ ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ ಹನುಮಂತರಾಯಪ್ಪ ಮುಂತಾದವರು ಉಪಸ್ಥಿತರಿದ್ದರು.
ಆಚರಣೆ ಸಾಲದು: ಮರಗಿಡಗಳನ್ನು ನಾಶಪಡಿಸುವಂತಹುದಕ್ಕೆ ಕಡಿವಾಣ ಹಾಕುವ ಸಲುವಾಗಿ ಜಾಗೃತಿ ಮೂಡಿಸಲು ಪ್ರತಿಯೊಬ್ಬರು ಮುಂದಾಗಬೇಕೆಂದು ನವ ಕರ್ನಾಟಕ ಪರಿಸರ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನೀರಜ್‌ರೆಡ್ಡಿ ಕರೆ ನೀಡಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಪ್ರತಿ ವರ್ಷ ಪರಿಸರ ದಿನಾಚರಣೆ ಆಚರಿಸುತ್ತಿದ್ದು ಈ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಇದು ಇನ್ನೂ ಹೆಚ್ಚಿಗೆ ನಡೆಯಬೇಕೆಂದರು.
ವೇದಿಕೆ ಜಿಲ್ಲಾಧ್ಯಕ್ಷ ನವೀನ್ ಗೌಡ ಮಾತನಾಡಿ, ಪರಿಸರ ಸಂರಕ್ಷಣೆ ಕೇವಲ ಕಾರ್ಯಕ್ರಮಗಳ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಗಿಡಮರಗಳನ್ನು ಬೆಳೆಸಿ ಪೋಷಿಸುವಂತಹುದು ಕೆಲಸದಲ್ಲಾಗಬೇಕೆಂದರು. ಕಾರ್ಯಕ್ರಮದಲ್ಲಿ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ನಜೀರ್ ಅಹಮದ್, ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್, ಮುಖ್ಯ ಶಿಕ್ಷಣ ನಾರೇಪರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement