ಬಡವರ ನಿವೇಶನ ವಿವಾದ ಬಗೆಹರಿಸಿದ ಶಾಸಕ ವರ್ತೂರ್
ಕೋಲಾರ: ಸುಮಾರು ಇಪ್ಪತ್ತು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ದಲಿತರಿಗೆ ನಿವೇಶನ ವಿತರಣೆ ಪ್ರಕರಣವನ್ನು ಶಾಸಕ ಆರ್.ವರ್ತೂರ್ ಪ್ರಕಾಶ್ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರ ತಾಲೂಕಿನ ಹೂಹಳ್ಳಿಯಲ್ಲಿ ವಸತಿ ರಹಿತ ದಲಿತ ಕುಟುಂಬಗಳಿಗೆ 39 ನಿವೇಶನ ವಿತರಿಸಲು ಅರಹಳ್ಳಿ ಗ್ರಾಪಂ ಮುಂದಾಗಿತ್ತು. ಆದರೆ, ನಿವೇಶನ ರಹಿತರನ್ನು ಗುರುತಿಸುವ ವಿಚಾರದಲ್ಲಿ ಹಾಗೂ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸುವ ವಿಚಾರ ವಿವಾದಕ್ಕೆ ತುತ್ತಾಗಿ ಪ್ರಕರಣ ನೆನೆಗುದಿಗೆ ಬಿದ್ದಿತ್ತು.
ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಶಾಸಕ ವರ್ತೂರ್, ಹೂಹಳ್ಳಿಯಲ್ಲಿರುವ ದಲಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅರ್ಹ ಬಡ ದಲಿತ ಕುಟುಂಬಗಳನ್ನು ಗುರುತಿಸಿ, 39 ನಿವೇಶನಗಳ ಆಸ್ತಿ ದಾಖಲೆ ಪತ್ರಗಳನ್ನು ಆಯಾ ಕುಟುಂಬಗಳಿಗೆ ವಿತರಿಸಲು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಗುರುವಾರ ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು, ನಿವೇಶನ ಪತ್ರಗಳನ್ನು ವಿತರಿಸಿದರು. ಈ ವೇಳೆ, ಹೂಹಳ್ಳಿ ವರ್ತೂರ್ ಪ್ರಕಾಶ್ ಬಣದ ಯುವ ಮುಖಂಡ ವಿಠೋಬ, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಹೂಹಳ್ಳಿ ಸೀನ, ನಾಗರಾಜ್, ಶ್ರೀನಿವಾಸ್, ನಾರಾಯಣಸ್ವಾಮಿ ಮತ್ತು ಫಲಾನುಭವಿ ಕುಟುಂಬಗಳ ಸದಸ್ಯರು ಇದ್ದರು.