ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಕ್ಕಲಮಡಗು ಹೊಸ ವಿವಾದ ಇತ್ಯರ್ಥ

Rashmi Kasaragodu
Updated On : 7 Jun 2014, 1:16 am

ಚಿಕ್ಕಬಳ್ಳಾಪುರ: ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಜಕ್ಕಲಮಡಗು ಜಲಾಶಯದ ನೀರಿನ ಬಳಕೆಯಲ್ಲಿ ದೊಡ್ಡಬಳ್ಳಾಪುರ ನಗರಸಭೆ ನೀತಿ ನಿಯಮಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಹೊಸದಾಗಿ ಉದ್ಭವವಾಗಿದ್ದ ವಿವಾದದ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಚರ್ಚಿಸಲಾಯಿತು.  ಅನಿವಾರ್ಯ ಕಾರಣಗಳಿಂದ ಪ್ರಸ್ತುತ ಉಂಟಾದ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ದೊಡ್ಡಬಳ್ಳಾಪುರ ನಗರಸಭೆ ತಿಳಿಸಿದ ನಂತರ ಪರಸ್ಪರ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಎರಡೂ ಕಡೆಯವರು ಸೌಹಾರ್ದ ಮನೋಭಾವನೆಯಿಂದ ನೀರನ್ನು ಬಳಕೆ ಮಾಡಿಕೊಂಡು ಹೋಗಲು ನಿರ್ಧರಿಸಿ ಸಭೆಗೆ ತೆರೆ ಎಳೆಯಲಾಯಿತು.
ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಗೌರಿಬಿದನೂರು ರಸ್ತೆಯಲ್ಲಿರುವ ಜಕ್ಕಲಮಡಗು ಜಲಾಶಯವು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ.ಜಲಾಶಯದಲ್ಲಿ ಸಂಗ್ರಹವಾಗುವ 4390 ದಶ ಲಕ್ಷ ಲೀಟರ್ ನೀರಿನಲ್ಲಿ ಚಿಕ್ಕಬಳ್ಳಾಪುರ ನಗರ ಮತ್ತು ಅದರ ಮಾರ್ಗದಲ್ಲಿ ಬರುವ ಹಳ್ಳಿಗಳಿಗೆ ಸೇರಿ ಶೇ.68.33 ರಷ್ಟು ನೀರನ್ನು ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಶೇ.31.67 ರಷ್ಟು ನೀರನ್ನು ಹಂಚಿಕೆ ಮಾಡಲಾಗಿದೆ. ಈ ನಡುವೆ ಲೋಕಸಭಾ ಚುನಾವಣೆ ನಡೆಯುತ್ತಿದ್ದ ವೇಳೆ ಸಮನ್ವಯ ಸಮಿತಿ ನೇತೃತ್ವದಲ್ಲಿ ನಿಗದಿಪಡಿಸಲಾಗಿದ್ದ ನಿಬಂಧನೆಗಳನ್ನು ಮೀರಿ ಸಂಗ್ರಹವಾಗಿದ್ದ ನೀರಿನಲ್ಲಿ ಹೆಚ್ಚುವರಿ ನೀರನ್ನು ದೊಡ್ಡಬಳ್ಳಾಪುರ ನಗರಸಭೆ ಪಡೆದುಕೊಂಡಿದೆ. ನಿಯಮ ಬಾಹಿರವಾಗಿ 5 ಅಡಿ ಅಳಕ್ಕೆ ಪೈಪ್ ಲೈನ್ ( ಫುಟ್ಬಾಲ್) ಅನ್ನು ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿಯ ಗಮನವನ್ನು ಚಿಕ್ಕಬಳ್ಳಾಪುರ ನಗರಸಭೆ ಸೆಳೆದಿದ್ದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಭೆಯನ್ನು ನಡೆಸಲಾಯಿತು.
ಶಾಸಕ ಕೆ. ಸುಧಾಕರ್ ಮಾತನಾಡಿ, ಜಕ್ಕಲಮಡಗು ಜಲಾಶಯ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರದ ನಡುವೆ ಮೊದಲಿನಿಂದ ವಿವಾದಗಳು ಉದ್ಭವವಾಗುತ್ತಿವೆ. ಈ ಹಿಂದೆ ವಿವಾದ ದೊಡ್ಡದಾದಾಗ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿ ನಿಬಂಧನೆಗಳನ್ನು ಹಾಕಲಾಯಿತು.ಇದನ್ನು ಎರಡೂ ಕಡೆಯವರು ಪಾಲಿಸಿಕೊಂಡು ಹೋಗಬೇಕೆಂದು ತಿಳಿಸಲಾಗಿತ್ತು. ದರಿಂದ ವಿವಾದ ತಣ್ಣಗಾದರೂ ಸಹ ಇದೀಗ ಹೆಚ್ಚುವರಿ ನೀರನ್ನು ಪೈಪ್ಲೈನ್ ಮೂಲಕ ಸರಬರಾಜು ಮಾಡುವ ಮೂಲಕ ದೊಡ್ಡಬಳ್ಳಾಪುರ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.
ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು ಕೊರೆಸುವ ಕೊಳವೆ ಬಾವಿಗಳಲ್ಲಿ ಹೆಚ್ಚಿಗೆ ನೀರು ಲಭ್ಯವಾಗುತ್ತಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ ಆತಂಕ ಜನರನ್ನು ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ದೊಡ್ಡದಾಗದಿರಲು ನೀರಿನ ಹಂಚಿಕೆ ವಿಷಯದಲ್ಲಿ ಎರಡೂ ಕಡೆಯವರು ಸರಿಯಾಗಿ ನಡೆದುಕೊಂಡು ಹೋಗಬೇಕಾಗಿದೆ ಎಂದರು.
ತಪ್ಪು ಸರಿಪಡಿಸಬೇಕು:  ತೀವ್ರ ಕುಡಿಯುವ ನೀರಿನ ಸಮಸ್ಯೆ ಕಾಡಿದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಂಡಿರುವುದು ತಪ್ಪಾಗಿದ್ದು ಇನ್ನೂ ಮುಂದೆ ಇದಕ್ಕೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕಾಗಿದೆ ಎಂದು ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ತಿಳಿಸಿದರು. ನಗರಸಭೆ ಅಧಿಕಾರಿಗಳ ತಪ್ಪು ಗ್ರಹಿಕೆಯಲ್ಲಿ ಇಂತಹ ಅಚಾತುರ್ಯ ನಡೆದು ಹೋಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಹೋಗಿ ಅಧಿಕಾರಿಗಳು ಇಂತಹ ಕೆಲಸವನ್ನು ಮಾಡಿದ್ದಾರೆ. ಇದನ್ನು ಇಲ್ಲಿಗೆ ಬಿಡಬೇಕು. ಮುಂದಿನ ದಿನಗಳಲ್ಲಿ ಪರಸ್ಪರ ಒಮ್ಮತದಿಂದ ನಡೆದುಕೊಂಡು ಹೋಗಬೇಕಾಗಿದೆ. ಕುಡಿಯುವ ನೀರಿನ ವಿಷಯದಲ್ಲಿ ಭಿನ್ನಾಭಿಪ್ರಾಯಗಳನ್ನು ದೊಡ್ಡದು ಮಾಡಿಕೊಂಡು ಹೋಗುವುದು ಬೇಡ ಎಂದು ತಿಳಿಸಿದರು.  ಎರಡೂ ಕಡೆ ಅಭಿಪ್ರಾಯಗಳನ್ನು ಆಲಿಸಿದ ಜಿಲ್ಲಾಧಿಕಾರಿ ವಿಶಾಲ್, ಪ್ರಸ್ತುತ ತಾಂತ್ರಿಕ ಕಾರಣಗಳಿಂದ ಮೀಟರ್ ಇನ್ನೂ ಅಳವಡಿಸಿಲ್ಲ. ಇದನ್ನು ತ್ವರಿತವಾಗಿ ಅಳವಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ನಿಬಂಧನೆಗಳನ್ನು ಮೀರಿ ನಡೆದುಕೊಳ್ಳಬಾರದು. ಸಮನ್ವಯ ಸಮಿತಿ ಗಮನಕ್ಕೆ ತರದೇ ಯಾವುದೇ ಬದಲಾವಣೆ ಕೆಲಸವನ್ನು ಮಾಡದಂತೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement