ಡಿಸಿಸಿ ಬ್ಯಾಂಕ್ಗೆ 10 ಕೋಟಿ ನೆರವು
ರಾಜ್ಯದಲ್ಲಿ 25 ಲಕ್ಷ ರೈತರಿಗೆ ಸಹಕಾರಿ ಸಾಲ ವಿತರಣೆ ನೀಡುವ ಗುರಿ: ಸಚಿವ ಮಹದೇವಪ್ರಸಾದ್ ಭರವಸೆ
ಬೆಂಗಳೂರಿನಲ್ಲಿ ಕೋಲಾರ ಡಿಸಿಸಿ ಬ್ಯಾಂಕ್ ಪುನಶ್ಚೇತನ ಚರ್ಚೆ, ಅಧ್ಯಕ್ಷರು ಸೇರಿ ಹಲವು ನಾಯಕರು ಭಾಗಿ
ಕ.ಪ್ರ.ವಾರ್ತೆ ಕೋಲಾರ ಜೂ.6
ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ರಾಜ್ಯದ 25 ಲಕ್ಷ ರೈತರಿಗೆ 10 ಸಾವಿರ ಕೋಟಿ ಸಾಲ ವಿತರಣೆ ಮಾಡುವ ಗುರಿ ಹೊಂದಿದೆ. ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರಿಗೂ ಹೆಚ್ಚಿನ ಸಾಲ ಕಲ್ಪಿಸಲಾಗುವುದು ಎಂದು ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಮಹದೇವಪ್ರಸಾದ್ ಭರವಸೆ ನೀಡಿದರು.
ಬೆಂಗಳೂರಿನ ವಿಧಾಸೌಧದಲ್ಲಿ ಶುಕ್ರವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಸಕರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಹಕಾರಿ ಸಾಲದಿಂದ ವಂಚಿತರಾಗಿರವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಡಿಸಿಸಿ ಬ್ಯಾಂಕ್ ಪುನಶ್ಚೇತನಕ್ಕೆ ಸರ್ಕಾರ ಬದ್ಧ. 2014-15ನೇ ಸಾಲಿನಲ್ಲಿ 25 ಲಕ್ಷ ರೈತರಿಗೆ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪುನಶ್ಚೇತನಕ್ಕೆ 10 ಕೋಟಿ ನೆರವು: ವೈದ್ಯನಾಥನ್ ವರದಿಯಂತೆ ಡಿಸಿಸಿ ಬ್ಯಾಂಕಿಗೆ ಬರಬೇಕಾದ 34 ಕೋಟಿಗೆ ಪೂರಕವಾಗಿ ರಾಜ್ಯ ಸರ್ಕಾರವೇ ಬ್ಯಾಂಕ್ಗೆ 10 ಕೋಟಿ ನೀಡಲಿದೆ. ಬ್ಯಾಂಕಿನಲ್ಲಿ ಸರ್ಕಾದ ಷೇರು ಪಾಲು ಶೇ.25. ಉಳಿದ 53.73 ಲಕ್ಷ ನೀಡಲಾಗುವುದು. ಬ್ಯಾಂಕ್ನಲ್ಲಿ ಖಾಲಿ ಇರುವ ಸ್ಥಾನಗಳಿಗೆ 25 ಮಂದಿ ನೇಮಕಕ್ಕೆ ಶೀಘ್ರ ಒಪ್ಪಿಗೆ ನೀಡಲಾಗುವುದು. ನೇಮಕಾತಿ ಪೂರ್ಣ ಪಾರದರ್ಶಕವಾಗಿರಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 89 ಅನರ್ಹ ಪತ್ತಿನ ಸಹಕಾರ ಸಂಘಗಳಿದ್ದು, ಇವುಗಳ ಪುನಶ್ಚೇತನಕ್ಕೆ ಒತ್ತು ನೀಡಬೇಕೆಂಬ ಡೆಪ್ಯೂಟಿ ಸ್ಪೀಕರ್ ಶಿವಶಂಕರರೆಡ್ಡಿ ಸೂಚಿಸಿದರು.
ನಬಾರ್ಡ್ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಸಚಿವರು ಸೂಚಿಸಿದರು. ಬ್ಯಾಂಕಿನ ವಹಿವಾಟು ಬಗ್ಗೆ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ವಿವರಿಸಿದರು. ಅಲ್ಲದೆ ಮನವಿ ಪತ್ರ ಕೂಡಾ ಸಲ್ಲಿಸಿದರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ಹಾಗೂ ಎಂಡಿ ರಮಣರೆಡ್ಡಿ, ಸಚಿವರ ಸೂಚನೆಯಂತೆ ಬ್ಯಾಂಕಿನಿಂದ ಸಾಲ ಸೌಲಭ್ಯ ಕಲ್ಪಿಸಲು ಒಪ್ಪಿಗೆ ನೀಡಿದರು.
ಯಾರ್ಯಾರು ಇದ್ದರು?: ಸಭೆಯಲ್ಲಿ ಶಾಸಕರಾದ ರಮೇಶ್ಕುಮಾರ್, ಕೊತ್ತೂರು ಮಂಜುನಾಥ್, ರಾಜಣ್ಣ, ಮಂಜುನಾಥಗೌಡ, ಕೃಷ್ಣಾರೆಡ್ಡಿ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಸಹಕಾರ ಸಂಘಗಳ ನಿಬಂಧಕ ಚನ್ನಪ್ಪಗೌಡ, ನಬಾರ್ಡ್ ಡಿಜಿಎಂ ರವೀಂದ್ರನಾಥ್, ಎಜಿಎಂ ಜೋಶಿ, ಸಹಕಾರ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಫಿಲಿಫ್ಸ್, ಅಪರ ನಿಬಂಧಕ ಮಠಪತಿ, ಕೋಲಾರ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೃಷ್ಣೇಗೌಡ, ನೀಲಕಂಠೇಗೌಡ, ದಯಾನಂದ್, ಹನುಮೇಗೌಡ, ಪಿ.ವಿ.ನಾಗರಾಜ್, ಶೀವಾರೆಡ್ಡಿ, ಶ್ರೀರಾಮರೆಡ್ಡಿ, ಹನುಮಂತರೆಡ್ಡಿ, ನರಸಿಂಹರೆಡ್ಡಿ, ಶಂಕರನಾರಾಯಣಗೌಡ, ಡಿಸಿಸಿ ಬ್ಯಾಂಕಿನ ಎಂಡಿ ವೆಂಕಟೇಶಪ್ಪ ಇದ್ದರು.