ಪರ್ಜನ್ಯಯಾಗ ಇಂದು
ಕೆಜಿಎಫ್: ಲೋಕಕಲ್ಯಾಣ ಹಾಗೂ ವರುಣನ ಕೃಪೆಗಾಗಿ ಜೂ.7ರಿಂದ 9ರವರೆಗೆ ಪರ್ಜನ್ಯ ಮಹಾಯಾಗವನ್ನು ಕೆಜಿಎಫ್ನ ವಿವೇಕನಗರದ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದೆ. ಗಣೇಶ್ಪುರಂನಲ್ಲಿನ ಶ್ರೀ ದುರ್ಗಾದೇವಿ ಸಮೇತ ಹಾಗೂ ಶ್ರೀ ಗಂಗಮ್ಮ ದೇವಾಲಯದ ಅರ್ಚಕ ಗುರುಮೂರ್ತಿ ದೀಕ್ಷಿತ್ರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹರಗುರು ಚರಣರಾದ ಕೃಷ್ಣಭಟ್, ಕೇಶವ ಅವದಾನಿ, ದಕ್ಷಿಣಾಮೂರ್ತಿ ಮತ್ತಿತರ ತಂಡ ಭಾಗವಹಿಸಲಿದೆ ಎಂದು ಮಹಾಯಾಗದ ಸಂಚಾಲಕರು ಹಾಗೂ ನಗರಸಭೆ ಸದಸ್ಯ ಎನ್.ನಟರಾಜನ್ ತಿಳಿಸಿದ್ದಾರೆ.
ಸಸಿ ನೆಡಲಾಗುವುದು: ಸಿಇಒ
ಮಾಲೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ಯಡಿ ತಾಲೂಕಿನಲ್ಲಿ 2.28 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಜಿಪಂ ಸಿಇಒ ವಿನೋತ್ ಪ್ರಿಯಾ ತಿಳಿಸಿದರು.
ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಸಾಮಾಜಿಕ ಅರಣ್ಯ ವಲಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನಡೆವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿ.ಪಂ.ಯೋಜನಾ ನಿರ್ದೇಶಕ ಚಲುವರಾಜು, ಸಂಪೂರ್ಣ ಸ್ವಚ್ಛತಾ ಆಂದೋಲನಾ ಯೋಜನೆಯ ಅಧಿಕಾರಿ ಮುನಿಸ್ವಾಮಿ ನಾಯ್ದು, ತಾಪಂ ಅಧ್ಯಕ್ಷೆ ಆಶಾ ರಾಜಪ್ಪ, ತಾಪಂ ಇಒ ಸಂಜೀವಪ್ಪ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ, ಜಿಪಂ ಎಇಇ ಬದ್ರಿನಾಥ್ ಇದ್ದರು.
ಕಲಾಪ ಬಹಿಷ್ಕರಿಸಿದ ವಕೀಲರು
ಶಿಡ್ಲಘಟ್ಟ: ಉತ್ತರ ಪ್ರದೇಶದಲ್ಲಿ ಮಹಿಳೆಯ ಮೇಲೆ ನಡೆದ ಆತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ತಾಲೂಕು ವಕೀಲರ ಸಂಘ, ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ, ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.
ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿದ ವಕೀಲರ ಸಂಘದ ತಾಲೂಕು ಅಧ್ಯಕ್ಷ ಪಾಪಿರೆಡ್ಡಿ, ಉತ್ತರ ಪ್ರದೇಶ ಸೇರಿದಂತೆ ಮಹಿಳೆಯರ ಮೇಲೆ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಆತಂಕ ಸೃಷ್ಟಿಸಿವೆ ಎಂದು ಹೇಳಿದರು. ವಿ.ಎಂ.ಬೈರಾರೆಡ್ಡಿ, ದ್ಯಾವಪ್ಪ, ಕೆ.ಎಂ.ಮಂಜುನಾಥ್, ಚಂದ್ರಶೇಖರ್ಗೌಡ, ಎಂ.ಬಿ.ಲೋಕೇಶ್, ಜೆ.ವೆಂಕಟೇಶ್, ವೇಣುಗೋಪಾಲ್, ಯಣ್ಣಂಗೂರು ಮಂಜುನಾಥ್, ಶ್ರೀನಿವಾಸ್, ವೆಂಕಟರೆಡ್ಡಿ, ರಾಘವೇಂದ್ರ, ವೆಂಕಟೇಶ್ ಬಾಬು ಮುಂತಾದವರು ಹಾಜರಿದ್ದರು.
ನಾಗರಾಜ್ ಅಧಿಕಾರ ಸ್ವೀಕಾರ
ಕೋಲಾರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ತೂಪಲ್ಲಿ ನಾರಾಯಣಸ್ವಾಮಿ ಅವರ ಅಧಿಕಾರದ ಅವಧಿ ಶುಕ್ರವಾರಕ್ಕೆ ಕೊನೆಗೊಂಡಿದ್ದು, ಮುಂದಿನ ಆಯ್ಕೆವರೆಗೂ ಪ್ರಭಾರಿ ಅಧ್ಯಕ್ಷರಾಗಿ ಜಿ.ಪಂ ಸದಸ್ಯ ನಾಗರಾಜ್ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಸಿಇಒ ವಿನೋತ್ ಪ್ರಿಯಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಆನಂದ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಕುಡುಕನಿಂದ ಕಿರಿಕಿರಿ
ಚಿಂತಾಮಣಿ: ಕುಡಿದ ಅಮಲಿನಲ್ಲಿ ಯುವಕನೊಬ್ಬ ರಸ್ತೆಯಲ್ಲಿ ಬರುವ ವಾಹನಗಳಿಗೆ ಅಡ್ಡಿಪಡಿಸಿ ನಾಗರಿಕರ ಜೊತೆ ಅಸಭ್ಯವಾಗಿ ವರ್ತಿಸಿ, ಈಗ ಪೋಲೀಸರ ಅತಿಥಿಯಾಗಿದ್ದಾನೆ. ಎಂ.ಜಿ.ರಸ್ತೆಯ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ವೆಂಕಟಗಿರಿಕೋಟೆ ನಿವಾಸಿ ಪೂರ್ತಿ ಕುಡಿದು ಸಾರ್ವಜನಿಕರಿಗೆ ತೊಂದರೆ ಕೊಡಲು ಆರಂಭಿಸಿದ್ದಾನೆ. ರಸ್ತೆಯಲ್ಲಿ ಬರುವ ವಾಹನಗಳಿಗೆ ಅಡ್ಡಿಪಡಿಸಿದ್ದಾನೆ. ಮಧ್ಯಾಹ್ನ ಒಂದು ಗಂಟೆಯವರೆಗೂ ಈತನ ಕಿರಿಕಿಯನ್ನು ನಡೆದಿತ್ತು. ಬಳಿಕ ಸಾರ್ವಜನಿಕರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.