ಪ್ರಬಲರ ಹಿಡಿತದಲ್ಲಿ ಸಹಕಾರಿ ರಂಗ
ಕೋಲಾರ: ಸಹಕಾರಿ ರಂಗ ಕೆಲವೇ ಮಂದಿಯ ಹಿಡಿತದಲ್ಲಿದ್ದು, ಸರ್ಕಾರ ಪ್ರಬಲವಾದ ಕಾಯಿದೆಗಳನ್ನು ಜಾರಿಗೆ ತಂದು ಸಹಕಾರ ರಂಗವನ್ನು ಬಲಾಢ್ಯರಿಂದ ಮುಕ್ತಿಗೊಳಿಸದಿದ್ದರೆ ರೈತರಿಗೆ ಅನ್ಯಾವಾಗುತ್ತದೆ ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಶಾಸಕ ರಮೇಶ್ಕುಮಾರ್ ಅಭಿಪ್ರಾಯಿಸಿದರು.
ಬೆಂಗಳೂರಿನ ವಿಧಾಸೌಧದ 303ರ ಕೊಠಡಿಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಮಹದೇವಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಜನತೆ ಮೀಟರ್ ಬಡ್ಡಿ ಸಾಲದ ಶೂಲದಲ್ಲಿ ಸಿಲುಕಿದ್ದಾರೆ. ಡಿಸಿಸಿ ಬ್ಯಾಂಕಿನಿಂದ ಕೇವಲ 12 ರಷ್ಟು ಮಂದಿಗೆ ಮಾತ್ರ ಸಾಲ ಸಿಕ್ಕಿದೆ ಎನ್ನುವುದು ಕೇಳಿಸಿಕೊಳ್ಳಲು ಆಗದಷ್ಟು ಬೇಸರದ ಸಂಗತಿ ಎಂದರು. ಪ್ರಬಲರು ಮಾಡಿದ ಕೋಟಿಗಟ್ಟಲೆ ಸಾಲ ಮರು ವಸೂಲಾತಿಗೆ ಯಾವುದೇ ಮಾನದಂಡ ಇಲ್ಲ. ಆದರೆ, ಬಡವರು ಪಡೆಯುವ ಸಾಲ ವಸೂಲಿಗಾಗಿ ಪ್ರಾಣ ಹಿಂಡಲಾಗುತ್ತಿದೆ, ಸಹಕಾರಿ ವಲಯದಲ್ಲಿ ಹಣ ನುಂಗಿದವರಿಗೆ ಶಿಕ್ಷೆ ಏರಿಲ್ಲವೆಂದು ಪ್ರಶ್ನಿಸಿದರು. ಇದೇ ವೇಳೆ, ಕೋಲಾರ ಡಿಸಿಸಿ ಬ್ಯಾಂಕ್ ಹೊಸ ಆಡಳಿತ ಮಂಡಳಿ ಬಂದ ನಂತರ 12 ಕೋಟಿ ಠೇವಣಿ ಸಂಗ್ರಹಿಸಿದರ ಬಗ್ಗೆ ಅಭಿನಂದಿಸಿದರು. ಈ ವೇಳೆ, ಅವರು ಅನೇಕ ಸಲಹೆಗಳನ್ನು ಕೂಡಾ ನೀಡಿದರು.