ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರು ತಾಪಂ ಸಭೆ: ಅಧಿಕಾರಿಗಳು ತರಾಟೆಗೆ

Rashmi Kasaragodu
Updated On : 7 Jun 2014, 1:15 am

ಮಾಲೂರು: ಸಭೆಗೆ ಸಮರ್ಪಕವಾಗಿ ಮಾಹಿತಿ ನೀಡದ ಇಲಾಖೆ ಅಧಿಕಾರಿಗಳನ್ನು ಪಕ್ಷಾತೀತವಾಗಿ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆದ ತಾಲೂಕು ಪಂಚಾಯ್ತಿ ಸಭೆಯಲ್ಲಿ ನಡೆಯಿತು.
ತಾಪಂ ಅಧ್ಯಕ್ಷೆ ಆಶಾ ರಾಜಪ್ಪ ಸಭೆ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಶಾಲೆಗಳಲ್ಲಿನ ಅಡುಗೆ ಮನೆಯ ಶುಚಿತ್ವದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಆನಂದ್ ಹಾಗೂ ಮೂರ್ತಿ ಅವರು, ಈ ಸಂಬಂಧ ಅಕ್ಷರ ದಾಸೋಹದ ಅಧಿಕಾರಿ ನಾರಾಯಣಸ್ವಾಮಿ ರವರನ್ನು ತರಾಟೆ ತೆಗೆದುಕೊಂಡರು. ಸಮವಸ್ತ್ರ ಧರಿಸದೆ, ಇಲಾಖೆ ಕೊಟ್ಟಿರುವ ಶುಚಿತ್ವದ ಪರಿಕರಗಳನ್ನು ಉಪಯೋಗಿಸದೆ ಮಕ್ಕಳಿಗೆ ಅಡುಗೆ ಮಾಡಿ ಹಾಕಲಾಗುತ್ತಿದೆ. ಅಡುಗೆ ಬಳಸಲು ತರಕಾರಿ-ಬೇಳೆಗಳು ಗುಣಮಟ್ಟದಲ್ಲಿರುವುದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಧ್ಯೆ ಪ್ರವೇಶಿಸಿದ ಇಒ ಸಂಜೀವಪ್ಪ ಅವರು ಮುಂದಿನ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಬರುವಂತೆ ತಿಳಿಸಿ ಮುಂದಿನ ವಿಷಯಕ್ಕೆ ಸಭೆಯನ್ನು ಕರೆದೂಯ್ದರು.
ತಾಲೂಕು ಕಣ್ಗಾವಲು ಘಟಕ ನೀಡಿರುವ ವರದಿಯಂತೆ ತಾಲೂಕಿನ 6 ಗ್ರಾಮಗಳಲ್ಲಿ ಕುಡಿಯಲು ಉಪಯೋಗಿಸುವ ನೀರಿನಲ್ಲಿ ಎನ್ಎಸ್ಬಿ ಅಂಶ ಕಂಡು ಬಂದಿದ್ದು, ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂಬ ತಾಲೂಕು ವೈದ್ಯಾಧಿಕಾರಿ ಡಾ.ಅನುರಾಧ ರವರ ಮಾತಿಗೆ ಸಹ ಮತ ವ್ಯಕ್ತಪಡಿಸಿದ ಸದಸ್ಯರು, ತಾಲೂಕಿನ ಟೇಕಲ್, ಮಾಸ್ತಿ, ಲಕ್ಕೂರು ಹೋಬಳಿಗಳಲ್ಲಿ ನೀರಿನ ಗುಣಮಟ್ಟ ಕುಸಿದಿದ್ದು,ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಈ ಬಗ್ಗೆ ಪಿಟಿಒ ಹಾಗೂ ವಾಟರ್ ಮೆನ್ ಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಇಒ ಸಂಜೀವಪ್ಪ ಸಭೆಗೆ ಭರವಸೆ ನೀಡಿದರು. ಎಸ್ಎಸ್ಎಲ್ಸಿಯಲ್ಲಿ ಫಲಿತಾಂಶ ಇಳಿಕೆಗೆ ಕಾರಣವೇನು? ಅಲ್ಲದೆ, ಶಾಲಾ ಸಮವಸ್ತ್ರ ವಿತರಣೆಯನ್ನು ಖಾಸಗಿ ಸಂಸ್ಥೆಗೆ ನೀಡಿದ್ದೇಕೆ ಎಂದು ಲೋಕೇಶ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭೆಯಲ್ಲಿ ಬಿಇಒ ಬದಲು ಹಾಜರಿದ್ದ ಅಧಿಕಾರಿ ಗಂಗಾಧರಯ್ಯ, ಶಾಲಾ ಸಮಿತಿ ಸಮವಸ್ತ್ರ ಪೂರೈಸಲು ಮುಂದಾಗಲಿಲ್ಲ. ಹಾಗಾಗಿ ಖಾಸಗಿಗೆ ವಹಿಸಲಾಗಿದೆ ಎಂದು ಹೇಳಿದರು. ವರ್ಷಕ್ಕೆ ಏಳು ದಿನ ತರಬೇತಿ ಪಡೆಯುವ ಶಿಕ್ಷಕರಿಗೆ ನೀಡಬೇಕಾದ 90 ಸ್ಟೈಪಂಡ್ ಹಣದಲ್ಲಿ ಕೇವಲ 50 ಮಾತ್ರ ಶಿಕ್ಷಕರ ಕೈ ಸೇರುತ್ತಿದೆ. ಉಳಿದ ಹಣ ಎಲ್ಲಿ ಎಂದು ಲೋಕೇಶ್ ಅವರು ಪ್ರಶ್ನಿಸಿದರು. ಮತ್ತೆ ಮಧ್ಯೆ ಪ್ರವೇಶಿಸಿದ ಇಒ,  ಈ ಎಲ್ಲ ವಿಷಯಗಳನ್ನು ಕ್ಷೇತ್ರಾಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು, ಸಭೆಗೆ ಮಾಹಿತಿ ನೀಡುವಂತೆ ತಿಳಿಸಲಾಗುವುದು ಎಂದು ಚರ್ಚೆಗೆ ತೆರೆಳೆದರು. ನಂತರ ಸಭೆಯಲ್ಲಿ 2013-14 ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಗಳನ್ನು ಅನುಮೋದಿಸಿ ಸಭೆಯ ಒಪ್ಪಿಗೆ ಪಡೆಯಲಾಯಿತು. ಉಪಾಧ್ಯಕ್ಷೆ ರಾಜಮ್ಮ, ಕೃಷ್ಣಪ್ಪ, ವ್ಯವಸ್ಥಾಪಕಿ ಭಾನುಮತಿ, ಸಹಾಯಕ ಅಧಿಕಾರಿ ನಾರಾಣಸ್ವಾಮಿ, ಸದಸ್ಯರಾದ ಗೋಪಾಲ್ ಗೌಡ, ರಾಧಮ್ಮ, ಅಮರಾವತಿ, ಪಾರ್ವತಮ್ಮ, ಚಂದ್ರಮ್ಮ, ನಾಗವೇಣಿ ಸೇರಿದಂತೆ ಎಲ್ಲ ಸದಸ್ಯರು, ಇಲಾಖಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement