ಮಾಸ್ತಿ ಧನ್ಯಜೀವಿ: ಆನಂದ್
ಚಿಂತಾಮಣಿ: ಕನ್ನಡ ಸಾರಸ್ವತ ಲೋಕದಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಾ ಕನ್ನಡ ಸಾಹಿತ್ಯವೇನೂ ಕಡಿಮೆಯದ್ದಲ್ಲ ಎಂದು ತೋರಿಸಿಕೊಟ್ಟ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಧನ್ಯಜೀವಿ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಹೇಳಿದರು. ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕವಿಸ್ಮರಣೆ ಕಾರ್ಯಕ್ರಮದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನೋತ್ಸವದಲ್ಲಿ ಉಪನ್ಯಾಸ ನೀಡಿದರು.ಮಾಸ್ತಿ ಅವರದ್ದು ಮಾತೃ ಭಾಷೆ ತಮಿಳು. ಆದರೂ ಅವರು ಆಯ್ಕೆ ಮಾಡಿಕೊಂಡಿದ್ದು ಕನ್ನಡ ಸಾಹಿತ್ಯ. ಅವರ ಸಾಹಿತ್ಯಕ್ಕೆ ಜ್ಞಾನಪೀಠವೂ ಲಭಿಸಿತು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಯನ್ನು ಗಮನಿಸಿಯೇ ಮಾಸ್ತಿ ಕನ್ನಡದ ಆಸ್ತಿ ಎಂಬ ನುಡಿ ಜನಜಿನಿತವಾಯಿತು. ಕವಿಸ್ಮರಣೆ ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿಗಳು ಉದ್ಘಾಟಿಸಿದರು. ಮಾಸ್ತಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ನಮನ ಸಲ್ಲಿಸಲಾಯಿತು. ಶಾಲೆಯ ಮುಖ್ಯಶಿಕ್ಷಕ ಎಸ್.ಎಂ.ರಾಘವೇಂದ್ರ, ಸಹ ಶಿಕ್ಷಕರಾದ ವಿ.ರವೀಂದ್ರಬಾಬು, ಪರಮೇಶ್ವರ, ಎನ್.ಮುನಿಶಾಮಿ, ಕೆ.ಸದಾಶಿವಪ್ಪ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.