ಸಿಡಿಲಿಗೆ 20 ಕೋತಿಗಳು ಸಮಾಧಿ
ಕೋಲಾರ: ಮಳೆಯ ಅಬ್ಬರದಿಂದ ಜಿಲ್ಲೆಯ ವಿವಿಧ ಕಡೆ ತರಕಾರಿ, ಹಣ್ಣು ನಾಶವಾಗಿರುವುದಲ್ಲದೆ ಸಿಡಿತ ಬಡಿದು ಕೋತಿಗಳ ಮಾರಣ ಹೋಮ ನಡೆದಿದೆ.
ಕೆಲವು ಕಡೆ ಪಾಲಿ ಹೌಸ್, ಹಳೆ ಕಟ್ಟಡಗಳಿಗೆ ಹಾನಿಯಾಗಿದೆ. ಮಾಲೂರು ತಾಲೂಕಿನ ತಂಬಳ್ಳಿಯಲ್ಲಿ ಮನೆಯ ಗೋಡೆ ಕುಸಿದು ರಾಜಪ್ಪ ಎಂಬುವರು ಗಾಯಗೊಂಡಿದ್ದಾರೆ. ಇವಿಷ್ಟು ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯ ಎಫೆಕ್ಟ್.
ಹತ್ತಾರು ವರ್ಷಗಳ ನಂತರ ಬಂಗಾರಪೇಟೆ ತಾಲೂಕಿನ ಮರಗಲ್ ಗ್ರಾಮದ ಬಳಿ ಸಣ್ಣ ಕೆರೆಯೊಂದು ಮಳೆಯಿಂದ ಭರ್ತಿಯಾಗಿದ್ದು, ಗ್ರಾಮಸ್ಥರು ಶುಕ್ರವಾರ ಕೆರೆಯಲ್ಲಿ ಗಂಗಾಪೂಜೆ ಸಲ್ಲಿಸಿದ್ದಾರೆ. ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿಗೆ ಸೇರಿದ ಮೈಲಾಂಡಹಳ್ಳಿಯ ಊರಾಚೆಯ ಮರವೊಂದರಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಅಡಗಿ ಕುಳಿತಿದ್ದ 20ಕ್ಕೂ ಹೆಚ್ಚು ಕೋತಿಗಳು ಅಬ್ಬರದ ಸಿಡಿಲಿಗೆ ಸಿಕ್ಕಿ ಸಾವನ್ನಪ್ಪಿವೆ.
ಗುಡಿ ಕಟ್ಟಲು ನಿರ್ಧಾರ
ಸತ್ತ ಕೋತಿಗಳಿಗೆ ಗ್ರಾಮಸ್ಥರು ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಿ, ಸಮಾಧಿ ಸ್ಥಳದಲ್ಲಿ ದೇವಾಲಯ ನಿರ್ಮಿಸಲು ನಿರ್ಧರಿಸಿದ್ದಾರೆ. ಸತ್ತ ಕೋತಿಗಳ ತಂಡದಲ್ಲಿ ಎರಡು-ಮೂರು ದಿನಗಳ ಹಿಂದೆ ಜನಿಸಿದ ಮರಿ ಕೋತಿಗಳು ಇವೆ. ಸತ್ತ ಮರಿಗಳನ್ನು ಕೈಗೆತ್ತಿಕೊಂಡು ರೋದಿಸಿದರು. ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಪಾಲಿ ಹೌಸಿನ ಮೇಲ್ಚಾವಣಿ ಗಾಳಿಗೆ ಹಾರಿ ಹೋಗಿದೆ. ಇದೇ ರೀತಿ ಬಂಗಾರಪೇಟೆ ಮತ್ತಿತರ ಕಡೆಯೂ ಮನೆಗಳಿಗೆ ಸಣ್ಣ-ಪುಟ್ಟ ಪ್ರಮಾಣದಲ್ಲಿ ಜಖಂ ಆಗಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ. ನಗರದ ಟಮಕ ಪ್ರದೇಶದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ಇಡೀ ರಾತ್ರಿ ಜಾಗರಣೆ ಮಾಡಬೇಕಾಯಿತು. ಶುಕ್ರವಾರ ಬೆಳಿಗ್ಗೆ ವಿಷಯ ತಿಳಿದ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಚರಂಡಿಗಳನ್ನು ಸ್ವಚ್ಛಗೊಳಿಸಿ ಮನೆ ನೀರು ಮನೆಗಳಿಗೆ ನುಗ್ಗದಂತೆ ಕಾಮಗಾರಿ ನಡೆಸಿದರು.
ಪುಷ್ಕರಣಿಗೆ ನೀರು
ಮುಳಬಾಗಲು, ಮಾಲೂರು, ಬಂಗಾರಪೇಟೆ ಹಾಗೂ ಕೋಲಾರದಲ್ಲಿ ತರಕಾರಿ ಮತ್ತು ಹಣ್ಣುಗಳು ಮಳೆಯಿಂದ ನೆಲಕಚ್ಚಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ಕೈಗೊಂಡಿದ್ದಾರೆ. ಗುರುವಾರ ಬಿದ್ದ ಜೋರು ಮಳೆಯಿಂದಾಗಿ ಕೋಲಾರದ ಕೆರೆಗಳಲ್ಲಿ ನೀರು ಕಾಣುವಂತಾಗಿದೆ. ಕೋಲಾರದ ಟೇಕಲ್ ವೃತ್ತದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ವೇಣುಗೋಪಾಲಸ್ವಾಮಿ ಪುಷ್ಕರಣಿಗೆ ನೀರು ಬಂದಿರುವುದರಿಂದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.