ಪರಿಸರ ಹಾನಿಯಿಂದ ಜೀವ ರಾಶಿಗೆ ಘಾಸಿ
ಕೋಲಾರ: ಪರಿಸರದ ಮಡಿಲಲ್ಲಿ ನಾವಿದ್ದು, ಅದನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪರಿಸರ ಚಿಂತಕ ಪುರುಷೋತ್ತಮರಾವ್ ಅಭಿಪ್ರಾಯಪಟ್ಟರು. ಇಲ್ಲಿನ ಸೈನಿಕ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಮಕ್ಕಳು ನಿಮ್ಮ ಹಿರಿಯರ ಇಲ್ಲವೇ ನಿಮ್ಮ ಹೆಸರಿನಲ್ಲೇ ಗಿಡವೊಂದನ್ನು ನೆಟ್ಟಿದ್ದಲ್ಲಿ ಅದು ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಬೆಳೆಯುತ್ತ ಫಲ-ಪುಷ್ಪಗಳನ್ನು ಹಾಗೂ ನೆರಳನ್ನು ನೀಡುವಂತಾಗುತ್ತದೆ ಇದರೊಂದಿಗೆ ಎಲ್ಲರಿಗೂ ಅಗತ್ಯವಿರುವ ಆಮ್ಲಜನಕ ಬಿಡುಗಡೆ ಮಾಡುತ್ತದೆ ಎಂದು ಹೇಳಿದರು.ಶಾಲೆಯ ಕಾರ್ಯದರ್ಶಿ ಮುನೇಗೌಡ, ಕನ್ನಡ ಶಿಕ್ಷಕ ಮಂಜುನಾಥ್, ಕಾಲೇಜು ಪ್ರಾಂಶುಪಾಲ ನಂಜುಂಡಗೌಡ, ಟ್ರಸ್ಟಿ ಶಾಂತಮ್ಮ, ಶಿಕ್ಷಣ ಸಂಯೋಜಕ ಜೋಷಿ, ಪ್ರಾಂಶುಪಾಲೆ ಫರೀನಾ ಇದ್ದರು. ಶಿಕ್ಷಕಿಯರಾದ ಹರ್ಷಿತಾ ಸ್ವಾಗತಿಸಿ, ಇಂದಿರಾ ನಿರೂಪಿಸಿ, ಶಶಿಕಲಾ ವಂದಿಸಿದರು.
ಇಡಗೂರಿನಲ್ಲಿ ಸಾಂಸ್ಕೃತಿಕ
ಸೌರಭ ಕಾರ್ಯಕ್ರಮ
ಗೌರಿಬಿದನೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪರಿವರ್ತನ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಇಡಗೂರು ಗ್ರಾಮದ ರುದ್ರಕವಿ ರಂಗಮಂದಿರಲ್ಲಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಸಾಂಸ್ಕೃತಿಕ ಸೌರಭ ಆಯೋಜಿಸಲಾಗಿತ್ತು. ಜಿ.ಸೋಮಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಹನುಮಂತರಾವ್, ಗ್ರಾಪಂ ಅಧ್ಯಕ್ಷೆ ಶಿಲ್ಪ ಶಿವಶಂಕರ್, ರಂಗ ಕಲಾವಿದ ಭೀಮಯ್ಯಮತ್ತಿತರರು ಉಪಸ್ಥಿತರಿದ್ದರು. ಅಂತಾರಾಷ್ಟ್ರೀಯ ಕಲಾವಿದ ಮುಖ ವೀಣೆ ಅಂಜಿನಪ್ಪ ಕಲಾವಾದನ ಗ್ರಾಮಸ್ಥರ ಮನಸೂರೆಗೊಂಡಿತು.ಹಾಸ್ಯ ಕಲಾವಿದ ಗಣೇಶ್ ತಂಡದಿಂದ ನಗೆಹಬ್ಬ ಮತ್ತು ತಿಪಟೂರು ಕಲಾವಿದ ಗುರುಸಿದ್ದಪ್ಪರಿಂದ ಭಜನೆ ಹಾಗೂ ಚಿಂತಾಮಣಿ ಮಂಜುನಾಥ ತಂಡದಿಂದ ಸುಗಮ ಸಂಗೀತ, ಇಡಗುಂಜಿ ಕಲಾ ಸಂಸ್ಥೆ ವತಿಯಿಂದ ಭರತನಾಟ್ಯ, ಜಾನಪದ ನೃತ್ಯ ಜಾನಪದ ಪರಂಪರೆಯನ್ನು ಗ್ರಾಮಸ್ಥರಿಗೆ ಉಣಬಡಿಸಲಾಯಿತು.