ಸುದರ್ಶನ್‌ಗೆ ಅರ್ಧಚಂದ್ರ: ಬೆಂಬಲಿಗರ ಅಸಮಾಧಾನ
ಕೋಲಾರ: ವಿಧಾನಪರಿಷತ್ ಇಲ್ಲವೇ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಹಿರಿಯ ಮುಖಂಡ, ಕೆಪಿಸಿಸಿ ವಕ್ತಾರ ವಿ.ಆರ್. ಸುದರ್ಶನ್‌ಗೆ ಅವಕಾಶ ಕಲ್ಪಿಸದಿರುವುದಕ್ಕೆ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಿಧಾನಪರಿಷತ್ ಸಭಾಪತಿಯಾಗಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿರುವ ಸುದರ್ಶನ್ ಅವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಿದ್ದರೆ ಸರ್ಕಾರ ಮತ್ತು ಪಕ್ಷಕ್ಕೆ ಒಳ್ಳೆಯದು ಆಗುತ್ತಿತ್ತು. ಅನುಭವಿ ರಾಜಕಾರಣಿ ಆಗಿರುವ ಸುದರ್ಶನ ಮೇಲ್ಮನೆಯಲ್ಲಿ ಸರ್ಕಾರದ ಕಾರ್ಯಕ್ರಮ ಸಮರ್ಥಿಸಿಕೊಳ್ಳಲು, ವಿರೋಧ ಪಕ್ಷದ ಟೀಕಾಸ್ತ್ರಗಳಿಗೆ ತಕ್ಕ ಉತ್ತರ ನೀಡುವಷ್ಟು ಪ್ರಬುದ್ಧ ರಾಜಕಾರಣಿ ಆಗಿರುವ ಸುದರ್ಶನ್ ಅವರನ್ನು ಕಡೆಗಣಿಸುತ್ತಿದ್ದಾರೆ ಎಂದು ಬೆಂಬಲಿಗರು ದೂರಿದ್ದಾರೆ.ಸುದರ್ಶನ್ ಅವರನ್ನು ಯಾವುದಾದರೊಂದು ನಿಗಮ-ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಲಿ ಇಲ್ಲವೇ ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ವೇಮಗಲ್ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಬೆಂಬಲಿಗರು ಆಗ್ರಹಿಸಿ, ಈ ಸಂಬಂಧ ಶೀಘ್ರವೇ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಬಳಿ ನಿಯೋಗ ತೆರಳಲು ನಿರ್ಧರಿಸಿದ್ದಾರೆ.